ನವದೆಹಲಿ : ಕೊರೊನಾ ಸಂಕಷ್ಟ ಕಾಲದಲ್ಲೇ ನಡೆದಿರುವ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ನಾಳೆ ಪ್ರಕಟವಾಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವಿನ ಸಮರವೆಂದೇ ಪರಿಗಣಿಸಲ್ಪಟ್ಟಿರುವ ಪಶ್ಚಿಮ ಬಂಗಾಳದ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ.
ಮಾರ್ಚ್ 27 ಮತ್ತು ಏಪ್ರಿಲ್ 29ರ ನಡುವೆ ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ, ಅಸ್ಸೋಂನಲ್ಲಿ ಮಾರ್ಚ್ 27, ಏಪ್ರಿಲ್ 1 ಮತ್ತು 6ರಂದು ಮೂರು ಹಂತಗಳಲ್ಲಿ ಮತದಾನ ನಡೆದರೆ, ತಮಿಳುನಾಡು, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಒಂದೇ ಹಂತದಲ್ಲಿ ಮತದಾನ ನಡೆದಿದ್ದು, ಅಸ್ಸೋಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳಲ್ಲಿ ಭಾನುವಾರ ಮತ ಎಣಿಕೆ ನಡೆಯಲಿದೆ.
ಬಿಜೆಪಿ ಈ ಬಾರಿ ಹೆಚ್ಚಿನ ರಾಜ್ಯಗಳ ಮೇಲೆ ತನ್ನ ಹಿಡಿತವನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ ಮತ್ತು ಕಾಂಗ್ರೆಸ್ ಕಳೆದುಹೋದ ತನ್ನ ಕ್ಷೇತ್ರಗಳನ್ನು ಮರಳಿ ಪಡೆಯಲು ತನ್ನ ಮೈತ್ರಿ ಪಕ್ಷಗಳೊಂದಿಗೆ ಸೇರಿ ಪ್ರಯತ್ನಿಸುತ್ತಿದೆ.
2016ರಲ್ಲಿ 822 ವಿಧಾನಸಭಾ ಕ್ಷೇತ್ರಗಳ ಮತಎಣಿಕೆಗೆ 1,002 ವೋಟ್ ಕೌಂಟಿಂಗ್ ಕೇಂದ್ರಗಳಿದ್ದವು. ಆದರೆ, ಈ ಬಾರಿ ಕೋವಿಡ್ ನಿಯಮ ಪಾಲಿಸಬೇಕಾಗಿರುವ ಕಾರಣ ಒಟ್ಟು 2,364 ಎಣಿಕೆ ಕೇಂದ್ರಗಳಿರಲಿದ್ದು, ಕೋವಿಡ್ ಮಾರ್ಗಸೂಚಿಯ ಕಾರಣಕ್ಕಾಗಿ 200 ಪ್ರತಿಶತಕ್ಕಿಂತಲೂ ಹೆಚ್ಚಿನ ಹೆಚ್ಚಳವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಪ್ರತಿ ಮತ ಎಣಿಕೆ ಕೇಂದ್ರದಲ್ಲಿ ಕನಿಷ್ಠ 15 ಬಾರಿ ಸ್ಯಾನಿಟೈಸೇಶನ್ ನಡೆಸಲಾಗುವುದು, ಸಾಮಾಜಿಕ ಅಂತರ ಪಾಲನೆ ಜೊತೆಗೆ ಜನರು ಗುಂಪು ಸೇರುವುದು ನಿಷೇಧ ಸೇರಿದಂತೆ ಇತರ ಮುನ್ನೆಚ್ಚರಿಕೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು, ಪಶ್ಚಿಮ ಬಂಗಾಳದಲ್ಲಿ ದೀದಿ ನೇತೃತ್ವದ ಟಿಎಂಸಿ ಹಾಗೂ ಬಿಜೆಪಿ ನಡುವೆ ಭಾರಿ ಪೈಪೋಟಿ ಇರಲಿದೆ ಎಂದು ಎಕ್ಸಿಟ್ ಪೋಲ್ ಅಥವಾ ಚುನಾವಣಾ ಪೂರ್ವ ಸಮೀಕ್ಷೆಗಳು ಈಗಾಗಲೇ ತಿಳಿಸಿವೆ.
ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ತಡರಾತ್ರಿರೆಗೂ ಮುಂದುವರಿಯುತ್ತದೆ ಎನ್ನಲಾಗಿದೆ. 1,100 ಮತ ಎಣಿಕೆಯ ಕೇಂದ್ರ ವೀಕ್ಷಕರು ಈ ಪ್ರಕ್ರಿಯೆಯನ್ನು ವೀಕ್ಷಿಸುತ್ತಾರೆ ಮತ್ತು ಅಭ್ಯರ್ಥಿಗಳು ಮತ್ತು ಏಜೆಂಟರು ಮತ ಎಣಿಕೆ ಕೇಂದ್ರಗಳಿಗೆ ಪ್ರವೇಶ ಪಡೆಯಲು ಕೋವಿಡ್ ನೆಗೆಟಿವ್ ವರದಿ ಅಥವಾ ವ್ಯಾಕ್ಸಿನೇಷನ್ ಪಡೆದಿರುವ ಸರ್ಟಿಫಿಕೇಟ್ ತೋರಿಸಬೇಕು.