ಸುಕ್ಮಾ: ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಲಿಂಗಂಪಲ್ಲಿ ಬೇಸ್ ಕ್ಯಾಂಪ್‌ನಲ್ಲಿ ಸಿಆರ್‌ಪಿಎಫ್ ಯೋಧನೋರ್ವ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ ಘಟನೆ ಕುರಿತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ತನಿಖೆ ನಡೆಸುವಂತೆ ಆದೇಶಿಸಿದೆ.
ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಿಂದ ಸುಮಾರು 400 ಕಿ.ಮೀ ದೂರದಲ್ಲಿರುವ ಸುಕ್ಮಾ ಜಿಲ್ಲೆಯ ಲಿಂಗಂಪಲ್ಲಿ ಬೇಸ್ ಕ್ಯಾಂಪ್‌ನಲ್ಲಿ ಇಂದು ಮುಂಜಾನೆ 3.30 ರ ಸುಮಾರಿಗೆ ಸಿಆರ್‌ಪಿಎಫ್ ಜವಾನನೊಬ್ಬರು ದೀಪಾವಳಿ ರಜೆಯ ವಿಚಾರವಾಗಿ ಜಗಳ ಮಾಡಿ, ಸಹೋದ್ಯೋಗಿಗಳಿಗೆ ಗುಂಡು ಹಾರಿಸಿದ್ದಾರೆ. ಪರಿಣಾಮ ನಾಲ್ವರು ಯೋಧರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಭದ್ರಾಚಲಂ ಏರಿಯಾ ಆಸ್ಪತ್ರೆಗೆ ಗಾಯಳು ಜವಾನರು ದಾಖಲು ಸಿಆರ್‌ಪಿಎಫ್‌ನ 50 ಬೆಟಾಲಿಯನ್ ಕಾನ್ಸ್ಟೇಬಲ್ ರೀತೇಶ್ ರಂಜನ್ ಗುಂಡು ಹಾರಿಸಿದ ಯೋಧ. ಬಿಹಾರದ ರಾಜಮಣಿ ಯಾದವ್, ದಾಂಜಿ ಮತ್ತು ಬಂಗಾಳದ ರಾಜುಮಂಡಲ್ ಮತ್ತು ಧರ್ಮೇಂದ್ರ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಗೊಂಡಿರುವ ಧನಂಜಯ್ ಕುಮಾರ್ ಸಿಂಗ್, ಧರ್ಮಾತ್ಮ ಕುಮಾರ್ ಮತ್ತು ಮಲ್ಯ ರಂಜನ್ ಮಹಾರಾಣಾ ಅವರನ್ನು ಭದ್ರಾಚಲಂ ಏರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ದೀಪಾವಳಿ ರಜೆಯ ವಿಚಾರವಾಗಿ ಯೋಧರ ಜಗಳ ಪ್ರಾರಂಭವಾಗಿದ್ದು, ಈ ವೇಳೆ ಗಲಾಟೆ ತಾರಕಕ್ಕೇರಿ ಸೈನಿಕ ರೀತೇಶ್ ರಂಜನ್, ನಿಯಂತ್ರಣ ಕಳೆದುಕೊಂಡು ಗನ್‌ನಿಂದ ಗುಂಡು ಹಾರಿಸಿದ್ದಾನೆ ಎಂದು ತಿಳಿದುಬಂದಿದೆ.