ಉತ್ತರಕಾಶಿ (ಉತ್ತರಾಖಂಡ): ಕಳೆದ ತಿಂಗಳು ಬಾಲಕಿಯೊಬ್ಬಳನ್ನು ಅಪಹರಿಸಲು ಯತ್ನಿಸಿದ ಆರೋಪದ ಮೇಲೆ ಕೋಮು ಉದ್ವಿಗ್ನತೆ ಉಂಟಾಗಿದ್ದ ಪುರೋಲಾದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪುರೋಲಾದಲ್ಲಿ ಮಹಾ ಪಂಚಾಯಿತಿ ನಡೆಸಲು ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ. ಜಿಲ್ಲೆಯ ಗಿರಿಧಾಮವಾಗಿರುವ ಈ ಪ್ರದೇಶದಲ್ಲಿ ಸಿಆರ್‌ಪಿಸಿ ಸೆಕ್ಷನ್ 144 ವಿಧಿಸಲಾಗಿದೆ ಎಂದು ಉತ್ತರಕಾಶಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಭಿಷೇಕ್ ರೋಹಿಲ್ಲಾ ತಿಳಿಸಿದ್ದಾರೆ.
ನಿಯಮದಂತೆ, ಒಂದು ಪ್ರದೇಶದಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜನರ ಸಭೆ ನಿಷೇಧಿಸಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಡಿಜಿಪಿ ಅಶೋಕ್ ಕುಮಾರ್ ಬುಧವಾರ ಎಚ್ಚರಿಕೆ ನೀಡಿದ್ದಾರೆ. "ಜಿಲ್ಲಾ ಪೊಲೀಸರು ಮತ್ತು ಆಡಳಿತ ಸಂಪೂರ್ಣ ಸನ್ನದ್ಧವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಾವು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಕಾನೂನು ಉಲ್ಲಂಘಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಉಲ್ಲಂಘಿಸಲು ಪ್ರಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು" ಡಿಜಿಪಿ ಹೇಳಿದರು.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಕಳೆದ ವಾರ ಸಚಿವಾಲಯದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದರು. ಮುಂಬರುವ ಲವ್ ಜಿಹಾದ್ ಪ್ರಕರಣಗಳ ಬಗ್ಗೆ ಕಟ್ಟುನಿಟ್ಟಾಗಿ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಡಿಜಿಪಿ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ವಿ.ಮುರುಗೇಶನ್ ಮತ್ತು ಗುಪ್ತಚರ ಇಲಾಖೆಯ ಅಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಕರಣದ ವಿವರ:ಉತ್ತರಕಾಶಿ ಪಟ್ಟಣ ಕಳೆದ ತಿಂಗಳು ಅಲ್ಪಸಂಖ್ಯಾತ ಸಮುದಾಯದ ಓರ್ವ ಬಾಲಕಿ ಸೇರಿದಂತೆ ಇಬ್ಬರು 14 ವರ್ಷದ ಬಾಲಕಿಯರ ಅಪಹರಣ ಯತ್ನ ಆರೋಪದ ಮೇಲೆ ಉದ್ವಿಗ್ನತೆಗೆ ಸಾಕ್ಷಿಯಾಗಿತ್ತು. ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುರುಗೇಶನ್ ಸೋಮವಾರ ಹೇಳಿದ್ದಾರೆ.