ನವದೆಹಲಿ: ಕೃಷಿ ಕಾಯ್ದೆಗಳ ವಿರೋಧಿಸಿ ದೆಹಲಿಯ ಗಡಿಗಳಲ್ಲಿ ರೈತರ ಪ್ರತಿಭಟನೆ ಮುಂದುವರೆಯುತ್ತಿದೆ. ಈಗಾಗಲೇ ಅನ್ನದಾತರ ಪ್ರತಿಭಟನೆ 80 ದಿನಗಳನ್ನು ದಾಟಿದ್ದು, ಸಿಂಘು, ಟಿಕ್ರಿ ಮತ್ತು ಘಾಜಿಪುರ ಗಡಿಗಳಲ್ಲಿ ಪ್ರತಿಭಟನಾಕಾರರ ಸಂಖ್ಯೆ ಕ್ಷೀಣಿಸುತ್ತಿರುವುದು ಕಂಡು ಬರುತ್ತಿದೆ.
ದಿನದಿಂದ ದಿನಕ್ಕೆ ಪ್ರತಿಭಟನೆ ತೀವ್ರವಾಗುತ್ತಿದ್ದರೂ ಕೂಡಾ ಶೇಕಡಾ 50ರಷ್ಟು ಮಂದಿ ಪ್ರತಿಭಟನಾಕಾರರು ಕಡಿಮೆಯಾಗಿದ್ದಾರೆ. ಪ್ರತಿಭಟನೆ ವೇಳೆ ಹಾಕಲಾಗಿದ್ದ ಟೆಂಟ್ಗಳು ಖಾಲಿ ಖಾಲಿಯಾಗಿದ್ದು, ಜನರು ಕಾಣುತ್ತಿಲ್ಲ.
ಇದನ್ನೂ ಓದಿ:ಕೋವಿಡ್ ಮಾರ್ಗಸೂಚಿ ಪಾಲಿಸಿ: ಕೈಮುಗಿದು ಮನವಿ ಮಾಡಿದ ಮುಂಬೈ ಮೇಯರ್!
ರೈತರ ಬೆಂಬಲಕ್ಕೆಂದೇ ಡಿಸೆಂಬರ್ 20, 2020ರಂದು ಅಸ್ತಿತ್ವಕ್ಕೆ ಬಂದ ಟ್ರಾಲಿ ಟೈಮ್ಸ್ ಪತ್ರಿಕೆಯ ಕಚೇರಿಗಳು ಮತ್ತು ಗ್ರಂಥಾಲಯಗಳು ಕೂಡಾ ಬಿಕೋ ಎನ್ನುತ್ತಿವೆ. ಈ ಪತ್ರಿಕೆಯ ಓದುಗರ ಸಂಖ್ಯೆಯೂ ಕಡಿಮೆಯಾಗಿದೆ.
ಕೆಲವೊಂದು ಮೂಲಗಳ ಪ್ರಕಾರ ಗಡಿಯಲ್ಲಿ ಪ್ರತಿಭಟನಾಕಾರರ ಸಂಖ್ಯೆ ಕಡಿಮೆಯಾಗುವಂತೆ ಮಾಡುವುದೂ ರೈತರ ಯೋಜನೆಯ ಭಾಗವಾಗಿದೆ. ರೈತ ಸಂಘಟನೆಗಳು ದೇಶದ ವಿವಿಧ ಭಾಗಗಳಿಗೆ ತೆರಳಿ, ಜನರ ಬೆಂಬಲ ಗಳಿಸಲು ಮುಂದಾಗಿದ್ದಾರೆ.
ದೇಶದ ಹಲವು ಭಾಗಗಳಲ್ಲಿ ಜನರು ಕೃಷಿ ಕಾನೂನುಗಳ ವಿರುದ್ಧ ಹೋರಾಡುತ್ತಿದ್ದು, ಮತ್ತೊಂದೆಡೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆಗಳು ನಡೆಯುತ್ತಿವೆ. ಇನ್ನೊಂದೆಡೆ ವಿದೇಶಿ ಸೆಲೆಬ್ರಿಟಿಗಳು ಕೂಡಾ ರೈತ ಹೋರಾಟಕ್ಕೆ ಬೆಂಬಲ ನೀಡಿರುವುದು ಸಾಕಷ್ಟು ಹೋರಾಟದ ಕಿಚ್ಚು ಹೆಚ್ಚಾಗುವಂತೆ ಮಾಡಿದೆ.