ಅಮರಾವತಿ (ಆಂಧ್ರಪ್ರದೇಶ):ವರ್ಷದ ಮೊದಲ ಹಬ್ಬ ಸಂಕ್ರಾಂತಿ ಬಂದ್ರೆ ದೇಶದೆಲ್ಲೆಡೆ ಸುಗ್ಗಿಯ ಸಂಭ್ರಮ. ಜೊತೆಗೆ, ಪ್ರಾಣಿಗಳ ಕಾಳಗ ಕೂಡ ಜೋರಾಗಿಯೇ ಇರುತ್ತದೆ.
ತಮಿಳುನಾಡಿನಲ್ಲಿ ಜಲ್ಲಿಕಟ್ಟು, ಕರ್ನಾಟಕದಲ್ಲಿ ಕಂಬಳ ನಡೆದರೆ ಆಂಧ್ರಪ್ರದೇಶವು ಕೋಳಿ ಕಾಳಗಕ್ಕೆ ಪ್ರಸಿದ್ಧಿ. ಆಂಧ್ರದಲ್ಲಿ ಮೂರು ದಿನಗಳ ಕಾಲ ನಡೆಯುವ ಈ ಹುಂಜಗಳ ಕಾದಾಟದ ವೇಳೆ ನಡೆಯುವ ಜೂಜಾಟದಲ್ಲಿ ಜನರು ಕೋಟ್ಯಂತರ ರೂ. ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕೋಳಿ ಕಾಳಗ ನಡೆಸದಂತೆ ನಿಷೇಧ ಹೇರಿದ್ದರೂ ಕೂಡ ಕೃಷ್ಣಾ ಜಿಲ್ಲೆಯ ಕೈಕಲೂರು ಕ್ಷೇತ್ರಾದ್ಯಂತ ರಾಜಕೀಯ ಪಕ್ಷದ ಮುಖಂಡರು ಕಾಳಗವನ್ನು ಆಯೋಜಿಸಿದ್ದರು. ಕೆಲವೆಡೆ ಪೋಕರ್ ಕ್ಲಬ್‌ಗಳನ್ನೂ ಸಹ ಸ್ಥಾಪಿಸಲಾಗಿತ್ತು. ಜಗ್ಗಯ್ಯಪೇಟೆ, ಚಿಲ್ಲಕಲ್ಲು, ಶೇರ್ ಮೊಹಮ್ಮದ್ ಪೇಟ, ತೊರಗುಂಟ ಪಾಲಂ, ಸತ್ಯನಾರಾಯಣಪುರಂನಲ್ಲಿ ಹುಂಜಗಳ ಕಾಲಿಗೆ ಚಾಕು ಕಟ್ಟಿ, ರಿಂಗ್‌ನಲ್ಲಿ ಬಿಡಲಾಗಿತ್ತು. ನೂಜಿವೇಡು ಕ್ಷೇತ್ರದ ಮುಸುನೂರು, ಅಗಿರಿಪಲ್ಲಿ, ಚಟ್ರಾಯಿ ಮಂಡಲಗಳಲ್ಲೂ ಕೋಳಿ ಕಾಳಗ ವೀಕ್ಷಿಸಲು ಸಾವಿರಾರು ಜನರು ಆಗಮಿಸಿದ್ದರು.
ಕೃಷ್ಣಾ ಜಿಲ್ಲೆಯ ಚಂದ್ರಲಪಾಡುವಿನಲ್ಲಿ ಎರಡು ಕಡೆ, ನಂದಿಗಾಮದಲ್ಲಿ 2 ಕಡೆ, ಕಂಚಿಕಚಾರ್ಲ ಮಂಡಲದ ಗಂಡೇಪಲ್ಲಿಯಲ್ಲಿ 2 ಕಡೆ ಹಾಗೂ ಪರಿತಾಳದಲ್ಲಿ ಒಂದು, ತೊಟ್ಲವಲ್ಲೂರು ಮಂಡಲ ಹಾಗೂ ಅಂಪಾಪುರಂನಲ್ಲಿ ಒಂದೊಂದು ಕಾಕ್ ಫೈಟ್ ರಿಂಗ್‌ಗಳನ್ನು ಸ್ಥಾಪಿಸಲಾಗಿದೆ. ಕೂಚಿಪುಡಿಯಲ್ಲಿ ಹುಂಜಗಳ ಕಾದಾಟದ ರಿಂಗ್ ಸ್ಥಾಪಿಸಿದ ಹಿನ್ನೆಲೆಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.
ಪ್ರಕಾಶಂ ಜಿಲ್ಲೆ: ಪ್ರಕಾಶಂ ಜಿಲ್ಲೆಯ ಯರ್ರಗೊಂಡಪಾಳಯಂ ಮಂಡಲದ ಉಪನಗರದಲ್ಲಿರುವ ಡಪಲ್ಲಿ ಗ್ರಾಮದಲ್ಲಿ ಹುಂಜಗಳ ಕಾಳಗ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ 15 ಮಂದಿಯನ್ನು ಬಂಧಿಸಿದ್ದಾರೆ. ಜೊತೆಗೆ 18 ಸಾವಿರ ನಗದು ಹಾಗೂ ಮೂರು ಹುಂಜಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೂರ್ವ ಮತ್ತು ಪಶ್ಚಿಮ ಗೋದಾವರಿ: ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಶುಕ್ರವಾರ ಭೋಗಿ ದಿನದಂದು ಕೋಳಿಗಳ ಕಾಳಗ ಆರಂಭಿಸಲಾಗಿತ್ತು. ಬೇರೆ ಜಿಲ್ಲೆ, ರಾಜ್ಯಗಳ ಜನರು ಸಹ ಸ್ಪರ್ಧೆಯಲ್ಲಿ ಭಾಗವಹಿಸಲು ಆಗಮಿಸಿದ್ದರು. ಪೂರ್ವ ಗೋದಾವರಿ ಜಿಲ್ಲೆಯೊಂದರಲ್ಲೇ ಮೊದಲ ದಿನ 12 ಸಾವಿರಕ್ಕೂ ಹೆಚ್ಚು ಹುಂಜಗಳು ಸಾವನ್ನಪ್ಪಿವೆ.
ವಿಜೇತರಿಗೆ ಇನ್ನೋವಾ ಕಾರು ಉಡುಗೊರೆ: ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳ ನಡುವೆ ಹಾಕಿರುವ ದೊಡ್ಡ ರಿಂಗ್‌ನಲ್ಲಿ ಗೆದ್ದವರಿಗೆ ಬೆಳ್ಳಿ ನಾಣ್ಯವನ್ನು ಬಹುಮಾನವಾಗಿ ನೀಡಲಾಗುತ್ತದೆ. ಜೊತೆಗೆ ವಿಜೇತರಿಗೆ ಇನ್ನೋವಾ ಕಾರು ಬಹುಮಾನವಾಗಿ ನೀಡಲಾಗುವುದು ಎಂದು ಘೋಷಿಸಲಾಗಿದೆ. ಆಡಳಿತ ಪಕ್ಷದ ಮುಮ್ಮಿಡಿವರಂ ಶಾಸಕ ಪೊನ್ನಡ ವೆಂಕಟಸತೀಶ್‌ಕುಮಾರ್ ಹಾಗೂ ಮಾಜಿ ಶಾಸಕ ದತ್ತಲ ಬುಚ್ಚಿಬಾಬು ಪಲ್ಲಂಕುರ್ರಿಗೆ ಭೇಟಿ ನೀಡಿ ಕೋಳಿಗಳ ಕಾಳಗ ವೀಕ್ಷಿಸಿದರು.
ಪಟ್ಟಣಗಳಲ್ಲಿ ಕಿಕ್ಕಿರಿದು ತುಂಬಿದ್ದ ಲಾಡ್ಜ್‌ಗಳು: ಕೋಳಿ ಕಾಳಗವನ್ನು ವೀಕ್ಷಿಸಲು ಮತ್ತು ಆಡಲು ಅನೇಕರು ಆಗಮಿಸಿದ ಹಿನ್ನೆಲೆ ತಾಡೆಪಲ್ಲಿಗುಡೆಂ ಮತ್ತು ತಣುಕು ಪಟ್ಟಣಗಳಲ್ಲಿನ ಲಾಡ್ಜ್‌ಗಳು ಜನರಿಂದ ತುಂಬಿ ತುಳುಕುತ್ತಿದ್ದವು. ಸಾಮಾನ್ಯವಾಗಿ 1,200 ರೂ. ಇದ್ದ ಕೊಠಡಿ ಬಾಡಿಗೆ 2,000 ರೂ.ನಿಂದ 3,000 ರೂ.ಗೆ ಹೆಚ್ಚಿಸಲಾಗಿತ್ತು. ಪಶ್ಚಿಮ ಗೋದಾವರಿಯಲ್ಲಿ ಕಾಲಿಗೆ ಚಾಕು ಕಟ್ಟಿದ್ದ ಹುಂಜವೊಂದು ಕಾಕ್ ಫೈಟ್ ರಿಂಗ್ಯಿಂದ ಜಿಗಿದು, ಒಬ್ಬ ವ್ಯಕ್ತಿಯನ್ನು ಗಾಯಗೊಳಿಸಿದೆ.
ಆಂಧ್ರಪ್ರದೇಶದ ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳು ಕೋಳಿ ಕಾಳಗಕ್ಕೆ ಪ್ರಸಿದ್ಧಿಯಾಗಿದ್ದು, ಕೋಳಿ ಕಾಳಗಕ್ಕೆ ಸಾಕಷ್ಟು ಬೆಟ್ಟಿಂಗ್ ಕೂಡ ನಡೆಸಲಾಗುತ್ತಿದೆ. ಪಂದ್ಯದಲ್ಲಿ ಪಾಲ್ಗೊಳ್ಳುವ ಎರಡು ಕೋಳಿಗಳ ಕಾಲುಗಳಿಗೆ ಹರಿತವಾದ ಬ್ಲೇಡ್‍ಗಳನ್ನು ಕಟ್ಟಲಾಗುತ್ತದೆ, ಕಾಲುಗಳಲ್ಲಿ ಕಟ್ಟಿರುವ ಬ್ಲೇಡ್‍ನಿಂದ ಯಾವ ಕೋಳಿಗೆ ಹೆಚ್ಚು ಗಾಯಗಳಾಗುತ್ತವೆಯೋ ಅಥವಾ ಸಾಯುತ್ತದೆಯೋ ಅದರ ಆಧಾರದ ಮೇಲೆ ಗೆಲುವನ್ನು ಪರಿಗಣಿಸಿ ಗೆದ್ದ ಕೋಳಿಯ ಮಾಲೀಕನಿಗೆ ಬೆಟ್ಟಿಂಗ್ ಹಣವನ್ನು ನೀಡಲಾಗುತ್ತದೆ.