ಹೈದರಾಬಾದ್(ತೆಲಂಗಾಣ):ಅತಿವೃಷ್ಟಿಯಿಂದ ಬೆಳೆ ನಷ್ಟ ಹಾಗೂ ಸಾಲಬಾಧೆ ತಾಳಲಾರದೇ ರಾಜ್ಯದ ವಿವಿಧೆಡೆ ಶುಕ್ರವಾರ ನಾಲ್ವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೆಲಂಗಾಣದ ಮುನುಗೋಡು, ಸಂಸ್ಥಾನ ನಾರಾಯಣಪುರ, ರೇಗೊಂಡ ಹಾಗೂ ಮುಲುಗು ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ. ಮೃತ ರೈತರನ್ನು ರಾಜಯ್ಯ (55), ರಾಮಕೃಷ್ಣ ರೆಡ್ಡಿ (43), ರಾಜಶೇಖರ್ ರೆಡ್ಡಿ (35) ಹಾಗೂ ಅನ್ನಂ ಕೃಷ್ಣ (32) ಎಂದು ಗುರುತಿಸಲಾಗಿದೆ.
ಮೊದಲ ಪ್ರಕರಣ:ಜಯಶಂಕರ್ - ಭೂಪಾಲಪಲ್ಲಿ ಜಿಲ್ಲೆಯ ಕೊತ್ತಪಲ್ಲಿಗೋರಿ ಮಂಡಲ ವೆಂಕಟೇಶ್ವರಪಲ್ಲಿಯ ರೈತ ಗಟ್ಟು ರಾಜಯ್ಯ 1.20 ಎಕರೆ ಜಮೀನು ಹೊಂದಿದ್ದರು. ಇದರ ಜತೆಗೆ 1.20 ಎಕರೆ ಜಮೀನು ಗುತ್ತಿಗೆ ಪಡೆದು ಮೆಣಸಿನ ಗಿಡ ನಾಟಿ ಮಾಡಿದ್ದರು. ಆದರೆ ಕರಿ ಹುಳು ಬಾಧೆಯಿಂದ ಬೆಳೆ ನಾಶವಾಗಿದೆ. ಇದಕ್ಕಾಗಿ ಅವರು 5 ಲಕ್ಷ ರೂ.ಗಳ ಸಾಲ ಮಾಡಿದ್ದರು. ಬಳಿಕ ಹತ್ತಿ ನಾಟಿ ಮಾಡಿದ್ದರು. ಆದರೆ ಇತ್ತೀಚೆಗೆ ಸುರಿದ ಮಳೆಗೆ ಬಹುತೇಕ ಗಿಡಗಳು ಕೊಚ್ಚಿ ಹೋಗಿವೆ. ಶುಕ್ರವಾರ ಬೆಳಗ್ಗೆ ವಿದ್ಯುತ್ ಮೋಟರ್ ಕೂಡ ಸುಟ್ಟು ಹೋಗಿದೆ. ಇದರಿಂದ ನೊಂದ ರೈತ ಗದ್ದೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
2ನೇ ಘಟನೆ: ಮುಲುಗು ಮಂಡಲದ ದೇವಗಿರಿಪಟ್ಟಣದ ಎರ್ರಂ ರಾಮಕೃಷ್ಣ ರೆಡ್ಡಿ ಎಂಬುವರು ತಮ್ಮ 30 ಗುಂಟೆ ಜಮೀನು ಸೇರಿ 7 ಎಕರೆ ಜಮೀನು ಗುತ್ತಿಗೆ ಪಡೆದು ಹತ್ತಿ ಕೃಷಿ ಮಾಡಿದ್ದರು. ಇತ್ತೀಚೆಗಷ್ಟೇ ಸುರಿದ ಭಾರಿ ಮಳೆಗೆ ಸಂಪೂರ್ಣ ಹಾನಿಯಾಗಿದೆ. ಬೇಸಾಯಕ್ಕೆ ಮಹಿಳಾ ಸಂಘ ಸೇರಿ ಬ್ಯಾಂಕ್ನಿಂದ 3.50 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ತೀರಿಸಲಾಗದೇ ಮೃತಪಟ್ಟಿದ್ದಾರೆ.