ಮುಜಾಫರ್‌ನಗರ (ಉತ್ತರ ಪ್ರದೇಶ):ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಅವರ ಸಂಬಂಧಿಕರನ್ನು 2020 ರಲ್ಲಿ ಪಂಜಾಬ್ನಲ್ಲಿ ಹತ್ಯೆಗೈದ ಕುಖ್ಯಾತ ರೌಡಿಶೀಟರ್ನನ್ನು ಉತ್ತರ ಪ್ರದೇಶದಲ್ಲಿ ಎನ್ಕೌಂಟರ್ (ಗುಂಡು ಹಾರಿಸಿ ಹತ್ಯೆ) ಮಾಡಲಾಗಿದೆ. ರಾಜಸ್ಥಾನದ ಮೂಲದ ಈ ಗ್ಯಾಂಗ್ಸ್ಟರ್ನನ್ನು ಮುಜಾಫರ್‌ನಗರ ಜಿಲ್ಲೆಯ ಶಾಹಪುರ್ ಪ್ರದೇಶದಲ್ಲಿ ಪೊಲೀಸರು ಹೊಡೆದುರುಳಿಸಿದ್ದಾರೆ.
ರೌಡಿ ರಶೀದ್ ಆಲಿಯಾಸ್ ಸಿಪಾಹಿಯಾ ಹತ್ಯೆಯಾದವನು. ಕೊಲೆ, ಡಕಾಯಿತಿ ಸೇರಿದಂತೆ 12 ಹತ್ಯೆ ಪ್ರಕರಣಗಳಲ್ಲಿ ಬೇಕಾಗಿದ್ದ ಈತನ ತಲೆಗೆ ಪೊಲೀಸರು 50 ಸಾವಿರ ರೂಪಾಯಿ ಘೋಷಿಸಿದ್ದರು. ಉತ್ತರ ಪ್ರದೇಶದಲ್ಲಿ ಸಿಕ್ಕಿಬಿದ್ದ ದುಷ್ಕರ್ಮಿಯನ್ನು ಎನ್ಕೌಂಟರ್ ಮಾಡಲಾಗಿದೆ ಎಂದು ಮುಜಾಫರ್‌ನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಸುಮನ್ ಖಚಿತಪಡಿಸಿದ್ದಾರೆ.
ಉಪ ಪೊಲೀಸ್ ವರಿಷ್ಠಾಧಿಕಾರಿ ವಿನಯ್ ಕುಮಾರ್ ಗೌತಮ್ ಅವರು ನೀಡಿದ ಮಾಹಿತಿಯಂತೆ, ರೌಡಿ ರಶೀದ್ ಮೊರಾದಾಬಾದ್‌ನಲ್ಲಿ ತಲೆಮರೆಸಿಕೊಂಡಿದ್ದ. ಯಾವುದೋ ಅಪರಾಧ ಕೃತ್ಯವನ್ನು ಮಾಡಲು ಮುಜಾಫರ್‌ನಗರಕ್ಕೆ ಬಂದಿದ್ದ. ಮಾಹಿತಿ ಅರಿತ ಪೊಲೀಸರು ಆತನ ಮೇಲೆ ದಾಳಿ ಮಾಡಿದರು. ಈ ವೇಳೆ ರೌಡಿ ಪೊಲೀಸ್ ಸಿಬ್ಬಂದಿಯ ಮೇಲೆಯೇ ಗುಂಡಿನ ದಾಳಿ ನಡೆಸಿದ್ದಾನೆ. ಪ್ರತಿದಾಳಿ ನಡೆಸಿದ ಪೊಲೀಸರು ಆತನನ್ನು ಹೊಡೆದುರುಳಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಬಬ್ಲು ಕುಮಾರ್‌ಗೂ ಗುಂಡು ತಗುಲಿದೆ. ರೌಡಿಶೀಟರ್ ರಶೀದ್‌ನ ಸಹಚರ ಪರಾರಿಯಾಗಿದ್ದಾನೆ ಎಂದು ತಿಳಿಸಿದರು.
ಅಪರಾಧ ಚಟುವಟಿಕೆಗಳ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ರಾಜಸ್ಥಾನ, ಉತ್ತರ ಪ್ರದೇಶ ಸೇರಿದಂತೆ ವಿವಿಧೆಡೆ ತನಿಖೆ ನಡೆಸಲಾಗುವುದು ಎಂದು ಮುಜಾಫರ್‌ನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಸುಮನ್ ಮಾಹಿತಿ ಒದಗಿಸಿದರು.