ಹೈದರಾಬಾದ್:ಯುವತಿ ತನ್ನನ್ನು ಮದುವೆಯಾಗಲು ನಿರಾಕರಿಸಿದಳೆಂದು ಯುವಕ ಆಕೆಯ ಕತ್ತು ಕೊಯ್ದು ತೀವ್ರವಾಗಿ ಗಾಯಗೊಳಿಸಿರುವ ಘಟನೆ ಹೈದರಾಬಾದ್ ನಗರದ ನರಸಿಂಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪುಪ್ಪಲಗುಡ ಟೀ ಗ್ರಿಲ್ ಹೋಟೆಲ್ ಬಳಿ ನಡೆದಿದೆ. ಪಲ್ನಾಡು ಜಿಲ್ಲೆಯ ಪಿದುಗುರಳ್ಳ ಮೂಲದ ಯುವತಿ (22) ಹೈದರಾಬಾದ್ನಲ್ಲಿ ಕೆಲಸ ಮಾಡುತ್ತಿದ್ದಳು. ಗಚ್ಚಿಬೌಲಿಯ ಹಾಸ್ಟೆಲ್ನಲ್ಲಿ ವಾಸವಿದ್ದಳು. ಹತ್ತಿರದ ಸಂಬಂಧಿ ಚಿಲಕಲೂರಿಪೇಟೆಯ ಕೋಟ ಗಣೇಶ್ (27) ಎಂಬಾತ ಗಚ್ಚಿಬೌಲಿಯಲ್ಲಿ ಫುಡ್ ಡೆಲಿವರಿ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಈ ಹಿಂದೆ ಗಣೇಶ್ನ ಜೊತೆಗೆ ಯುವತಿಯನ್ನು ಮದುವೆ ಮಾಡಲು ಪೋಷಕರು ಮುಂದಾಗಿದ್ದು, ಯುವತಿ ಮದುವೆ ನಿರಾಕರಿಸಿದ್ದಳಂತೆ.
ಮಂಗಳವಾರ ರಾತ್ರಿ ಹಾಸ್ಟೆಲ್ನಲ್ಲಿದ್ದ ಆಕೆಗೆ ಕರೆ ಮಾಡಿ, ಬೈಕ್ನಲ್ಲಿ ಟೀ ಗ್ರಿಲ್ ಹೋಟೆಲ್ಗೆ ಕರೆದೊಯ್ದಿದ್ದಾನೆ. ಈ ವೇಳೆ ಗಣೇಶ್ ಮತ್ತೊಮ್ಮೆ ಯುವತಿ ಎದುರು ಮದುವೆ ಪ್ರಸ್ತಾಪ ಮಾಡಿದ್ದಾನೆ. ಆಕೆ ಮತ್ತೆ ನಿರಾಕರಿಸಿದ್ದಾಳೆ. ಇದು ಇಬ್ಬರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಈ ಸಂದರ್ಭದಲ್ಲಿ ಆರೋಪಿ ತನ್ನ ಬ್ಯಾಗ್ನಿಂದ ಚಾಕು ತೆಗೆದು ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಯುವತಿಯ ಗಂಟಲು ಮತ್ತು ಮುಖದ ಮೇಲೆ ತೀವ್ರ ಸ್ವರೂಪದ ಗಾಯಗಳಾಗಿವೆ. ದಾಳಿಯನ್ನು ತಡೆಯುವ ಭರದಲ್ಲಿ ಯುವತಿಯ ಕೈಗಳಿಗೂ ಗಾಯವಾಗಿದೆ.
ನಂತರ ಗಣೇಶ್ ತೀವ್ರ ಗಾಯಗೊಂಡಿದ್ದ ಆಕೆಯನ್ನು ಚಿಕಿತ್ಸೆಗಾಗಿ ಸಮೀಪದ ಕಾಂಟಿನೆಂಟಲ್ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ವೈದ್ಯಕೀಯ ಸಿಬ್ಬಂದಿಯಿಂದ ಮಾಹಿತಿ ಪಡೆದ ಗಚಿಬೌಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂತ್ರಸ್ತೆಯಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಪ್ರಕರಣವು ನರಸಿಂಗಿ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತದೆ ಎಂದು ಗಚಿಬೌಲಿ ಪೊಲೀಸರು ಅವರಿಗೆ ಸಂದೇಶ ಕಳಿಸಿದ್ದಾರೆ. ನರಸಿಂಗಿ ಪೊಲೀಸರು ತಕ್ಷಣ ಗಣೇಶ್ನನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ.