ಇಂಫಾಲ:ಮಣಿಪುರದಲ್ಲಿ ಬುಡಕಟ್ಟು ಸಮುದಾಯಗಳ ನಡುವಿನ ಸಂಘರ್ಷ ದಿನಕ್ಕೊಂದು ಸ್ವರೂಪ ತಾಳುತ್ತಿದೆ. ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಹಳೆಯ ವಿಡಿಯೋ ಇದೀಗ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅಮಾನವೀಯವಾಗಿ ನಡೆದುಕೊಂಡ ದುರುಳರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಕಾಂಗ್ರೆಸ್, ಟಿಎಂಸಿ ಹಾಗು ಆಪ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಕೇಂದ್ರ ಸರ್ಕಾರವನ್ನು ಆಗ್ರಹಿಸಿವೆ.
ಮೇ 4ರಂದು ಈ ನಾಚಿಕೆಗೇಡಿನ ವಿದ್ಯಮಾನ ನಡೆದಿದೆ ಎನ್ನಲಾಗುತ್ತಿದೆ. ಶಸ್ತ್ರಸಜ್ಜಿತ ಜನರ ಗುಂಪೊಂದು ಮಹಿಳೆಯರಿಬ್ಬರನ್ನು ಬೆತ್ತಲೆಗೊಳಿಸಿ ಬಲವಂತವಾಗಿ ರಸ್ತೆಯುದ್ದಕ್ಕೂ ಎಳೆದೊಯ್ದಿದ್ದಾರೆ. ಆ ಬಳಿಕ ಅವರ ಮೇಲೆ ಗ್ಯಾಂಗ್ ರೇಪ್ ಮಾಡಲಾಗಿದೆ ಎಂಬ ಗಂಭೀರ ಆರೋಪವಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ದುಷ್ಕರ್ಮಿಗಳ ವಿರುದ್ಧ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.
ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಹೇಯ ಕೃತ್ಯ ನಡೆದಿದೆ. ಪುರುಷರ ಗುಂಪೊಂದು ಅಸಹಾಯಕ ಹೆಣ್ಣು ಮಕ್ಕಳನ್ನು ದೈಹಿಕವಾಗಿ ಹಿಂಸಿಸಿ, ಬೆತ್ತಲೆ ಮಾಡಿ ಕರೆದುಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಹೀಗೆ ಸೆರೆಯಾಳಾಗಿದ್ದ ಮಹಿಳೆಯರು ತಮ್ಮನ್ನು ಬಿಟ್ಟುಬಿಡಿ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿರುವುದನ್ನು ನೋಡಬಹುದು. ಮಹಿಳೆಯರು ಅನುಭವಿಸಿದ ಯಾತನೆ, ಭಯಾನಕ ಅವಮಾನಕ್ಕೆ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದೆ.
ನಾಚಿಕೆಗೇಡಿನ ಸಂಗತಿ- ಕೇಜ್ರಿವಾಲ್: "ಜನಾಂಗೀಯ ಹಿಂಸಾಚಾರಪೀಡಿತ ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ್ದು, ಮಾನವ ಕುಲವೇ ನಾಚಿಕೆಪಡುವಂತಾಗಿದೆ" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಖಂಡಿಸಿದ್ದಾರೆ. "ರಾಜ್ಯದಲ್ಲಿನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಗಮನಹರಿಸಿ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಬೇಕು" ಎಂದು ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಇದೇ ವೇಳೆ ಒತ್ತಾಯಿಸಿದ್ದಾರೆ.