ಪಾಟ್ನಾ(ಬಿಹಾರ):ಮಾಜಿ ಶಿಕ್ಷಣ ಸಚಿವ ಮತ್ತು ಆರ್ಜೆಡಿ ಮುಖಂಡ ವೃಶಿನ್ ಪಟೇಲ್ ಅವರಿಗೆ ಮಹಿಳೆಯೊಬ್ಬರು ವಾಟ್ಸ್ಆ್ಯಪ್ನಲ್ಲಿ ಅಶ್ಲೀಲ ಫೋಟೋಗಳನ್ನು ಕಳುಹಿಸಿ, 50 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಈ ಸಂಬಂಧ ವೃಶಿನ್ ಇಒಯುಗೆ(ಆರ್ಥಿಕ ಅಪರಾಧಗಳ ಘಟಕ) ಲಿಖಿತ ದೂರು ಸಲ್ಲಿಸಿದ್ದಾರೆ. ಆರೋಪಿ ಮಹಿಳೆ ಈ ಹಿಂದೆ ಅನೇಕ ಬಾರಿ ವೃಶಿನ್ ಪಟೇಲ್ ಅವರನ್ನು ಭೇಟಿಯಾಗಿದ್ದಳು ಎಂದು ಹೇಳಲಾಗುತ್ತಿದೆ.
ವೃಶಿನ್ ಪಟೇಲ್ ನೀಡಿರುವ ದೂರಿನಲ್ಲಿ ಏನಿದೆ?:ಎರಡು ತಿಂಗಳ ಹಿಂದೆ ಈ ಮಹಿಳೆ ನನ್ನನ್ನು ಭೇಟಿಯಾಗಲು ನಿವಾಸಕ್ಕೆ ಬಂದಿದ್ದಳು, ಆದರೆ ಆಕೆಯನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಮಹಿಳೆ ಎಂಎಲ್ಎ ಆಗುವ ಬಯಕೆಯನ್ನು ನನ್ನ ಬಳಿ ವ್ಯಕ್ತಪಡಿಸಿದ್ದರು. ನಾನು ಇದೆಲ್ಲವನ್ನೂ ನಿರ್ಲಕ್ಷಿಸಿದಾಗ, ನನ್ನ ಮೊಬೈಲ್‌ಗೆ ತಿರುಚಿದ ಅಶ್ಲೀಲ ಫೋಟೋಗಳನ್ನು ಕಳುಹಿಸಲಾಗಿದೆ. ನಂತರ ಇದರ ಪರಿಣಾಮವನ್ನು ನೀವು ಎದುರಿಸಬೇಕಾಗುತ್ತದೆ ಮತ್ತು ನಿನ್ನ ರಾಜಕೀಯ ಜೀವನವನ್ನೇ ಹಾಳು ಮಾಡುವುದಾಗಿ ಮಹಿಳೆ ಬೆದರಿಕೆ ಹಾಕಿದ್ದಾರೆ ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸೈಬರ್ ಪೊಲೀಸರಿಂದ ಪ್ರಕರಣದ ತನಿಖೆ:ಈ ಕುರಿತು ಮಾಜಿ ಶಿಕ್ಷಣ ಸಚಿವ ವೃಶಿನ್ ಪಟೇಲ್ ಪ್ರತಿಕ್ರಿಯಿಸಿ, " ವಾಟ್ಸ್ಆ್ಯಪ್ನಲ್ಲಿ ಅಶ್ಲೀಲ ಫೋಟೋಗಳನ್ನು ಕಳುಹಿಸುವ ಮೂಲಕ ನನ್ನ ರಾಜಕೀಯ ಜೀವನವನ್ನು ಹಾಳು ಮಾಡುವುದಾಗಿ ಮಹಿಳೆ ಬೆದರಿಕೆ ಹಾಕಿದ್ದಾಳೆ. ಜೊತೆಗೆ 50 ಲಕ್ಷ ರೂಗೆ ಬೇಡಿಕೆಯಿಟ್ಟಿದ್ದಾಳೆ. ಹಣ ನೀಡದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೆದರಿಸಿದ್ದಾಳೆ. ಈ ಸಂಬಂಧ ಪಾಟ್ನಾದ ಆರ್ಥಿಕ ಇಲಾಖೆಯ ಅಪರಾಧ ಘಟಕಕ್ಕೆ ದೂರು ನೀಡಲಾಗಿದೆ. ಸೈಬರ್ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ" ಎಂದು ತಿಳಿಸಿದ್ದಾರೆ.