ಪೂರ್ಣಿಯಾ(ಬಿಹಾರ): ಪ್ರಿಯಕರನಿಗಾಗಿ ಮಹಿಳೆಯೊಬ್ಬಳು ತನ್ನ ಮೂರು ವರ್ಷದ ಮಗನನ್ನೇ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಪೂರ್ಣಿಯಾ ಜಿಲ್ಲೆಯ ಭವಾನಿಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಕೃತ್ಯ ಎಸಗಿದ ಬಳಿಕ ಮಹಿಳೆ ಮೃತದೇಹವನ್ನು ವಿಲೇವಾರಿ ಮಾಡಲು ಯತ್ನಿಸುವ ವೇಳೆ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಕುಟುಂಬಸ್ಥರ ಮಾಹಿತಿಯ ಪ್ರಕಾರ, ಮಹಿಳೆಯ ಪತಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಮೂರು ವರ್ಷ ಕಳೆದರೂ ಮನೆಗೆ ಬಂದಿರಲಿಲ್ಲ. ಇದರ ಮಧ್ಯೆ ಮಹಿಳೆಗೆ ಬೇರೊಬ್ಬನೊಂದಿಗೆ ಪ್ರೇಮಾಂಕುರವಾಗಿದೆ. ಆದರೆ ಆಕೆಯ ಪ್ರಿಯಕರ ಮಗುವನ್ನು ಜೊತೆಗಿಟ್ಟುಕೊಳ್ಳಲು ನಿರಾಕರಿಸುತ್ತಿದ್ದ. ಇದರಿಂದ ಮಹಿಳೆ ತನ್ನ ಮೂರು ವರ್ಷದ ಮಗನನ್ನು ಕೊಂದು ಶವವನ್ನು ವಿಲೇವಾರಿ ಮಾಡಿದ ನಂತರ ಪ್ರಿಯಕರನ ಬಳಿಗೆ ಹೋಗಲು ಪ್ರಯತ್ನಿಸಿದ್ದಳು. ಆದರೆ ಗ್ರಾಮಸ್ಥರು ಆಕೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೃತ ಬಾಲಕನ ಅಜ್ಜಿ ಮಾತನಾಡಿ, "ಮುಂಜಾನೆ ಮೂರು ಗಂಟೆಗೆ ನನ್ನ ಸೊಸೆ ಮನೆಗೆ ಮಗುವನ್ನು ಎಲ್ಲಿಗೋ ಕರೆದೊಯ್ಯುತ್ತಿದ್ದಳು. ಈ ವೇಳೆ ಗ್ರಾಮಸ್ಥರು ಕಳ್ಳ ಎಂದು ಭಾವಿಸಿ ಕೂಗಲು ಪ್ರಾರಂಭಿಸಿದ್ದರು. ಇದರ ನಂತರ ನನ್ನ ಸೊಸೆ ತನ್ನ ಮಗನನ್ನು ಕೋಣೆಯಲ್ಲಿ ಇರಿಸಿ ಲಾಕ್ ಮಾಡಿ ಮಗು ಮಲಗಿದೆ ಎಂದು ಹೇಳಿದ್ದಳು. ಬಹಳ ಸಮಯದ ನಂತರ ಕೋಣೆಯ ಬಾಗಿಲು ತೆರೆದು ಮಗುವನ್ನು ನೋಡಲು ಹೋದಾಗ ಮಗು ಮೃತಪಟ್ಟಿತ್ತು. ನನ್ನ ಸೊಸೆ ಬೇರೊಬ್ಬನೊಂದಿಗೆ ಸಂಬಂಧ ಹೊಂದಿದ್ದಳು. ಈ ಕಾರಣದಿಂದಾಗಿಯೇ ಆಕೆ ನನ್ನ ಮೊಮ್ಮಗನನ್ನು ಕೊಂದಿದ್ದಾಳೆ" ಎಂದು ಆರೋಪಿಸಿದರು.