ಮುಜಾಫರ್ಪುರ(ಬಿಹಾರ):ಅದೆಷ್ಟೇ ಕೋಪ ಇದ್ರೂ ಮನುಷ್ಯನನ್ನು ಬೆಂಕಿ ಹಚ್ಚಿ ಸುಟ್ಟು ಹಾಕುವುದು ಕ್ರೌರ್ಯವೇ ಸರಿ. ಅಂಥಹದ್ದೇ ಭೀಕರ ಘಟನೆ ಬಿಹಾರದ ಮುಜಾಫರ್ಪುರದಲ್ಲಿ ನಡೆದಿದೆ. ಪತ್ನಿಯೇ ತನ್ನ ಗಂಡನನ್ನು ಮರಕ್ಕೆ ಕಟ್ಟಿ ಹಾಕಿ, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಜೀವಂತವಾಗಿ ದಹಿಸಿದ್ದಾಳೆ. ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಮುಜಾಫರ್ಪುರ ಜಿಲ್ಲೆಯ ಸಾಹೇಬ್ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ವಸುದೇವ್ಪುರ ಸರೈ ಗ್ರಾಮದಲ್ಲಿ ನಡೆದಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿ ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ. ಮಹಿಳೆ ಯಾಕಾಗಿ ಬೆಂಕಿ ಹಚ್ಚಿದಳು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಸೆಲ್ಫಿ ತೆಗೆವ ನೆಪದಲ್ಲಿ ಬೆಂಕಿ:ಮೊಬೈಲ್ನಲ್ಲಿ ಸೆಲ್ಫಿ ತೆಗೆಯುವ ನೆಪದಲ್ಲಿ ಪತ್ನಿ ಮೊದಲು ಪತಿಯನ್ನು ಮರಕ್ಕೆ ಕಟ್ಟಿ ಹಾಕಿದ್ದಾಳೆ. ಬಳಿಕ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. ಬೆಂಕಿ ಜ್ವಾಲೆಯನ್ನು ಕಂಡ ಸುತ್ತಮುತ್ತಲಿನವರು ಓಡಿ ಬಂದು ರಕ್ಷಿಸಿದ್ದಾರೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದು, ಸದ್ಯಕ್ಕೆ ಪ್ರಾಣ ಉಳಿದುಕೊಂಡಿದೆ. ಘಟನೆಯ ಬಳಿಕ ಸ್ಥಳೀಯರು ಸಾಹೇಬಗಂಜ್ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುವಿನ ಹೇಳಿಕೆಯ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪತ್ನಿಯ ಸಿಟ್ಟಿನ ಕಾರಣವೇನು?:ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುವಿನ ಹೇಳಿಕೆ ಪಡೆದಿರುವ ಪೊಲೀಸರು, ತನ್ನ ಹೆಂಡತಿಯೇ ಕೊಲ್ಲಲು ಬಯಸಿದ್ದಳು. ಸೆಲ್ಫಿ ತೆಗೆಯುವ ನಾಟಕವಾಡಿ ತನ್ನನ್ನು ಮರಕ್ಕೆ ಕಟ್ಟಿಹಾಕಿದಳು ಬಳಿಕ ಬೆಂಕಿ ಹಚ್ಚಿದಳು. ಇದರ ಹಿಂದಿನ ನಿಜವಾದ ಕಾರಣ ಏನು ಎಂಬುದು ತಿಳಿದಿಲ್ಲ ಎಂದು ಸಂತ್ರಸ್ತ ಹೇಳಿದ್ದಾನೆ. ಮತ್ತೊಂದೆಡೆ, ಮಹಿಳೆ ಬೇರೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ. ಇದರಿಂದ ಆಕೆ ಪತಿಯನ್ನು ಕೊಲ್ಲಲು ಬಯಸಿದ್ದಳು ಎಂದು ಗಾಯಾಳುವಿನ ಸಂಬಂಧಿಕರು ಆರೋಪಿಸಿದ್ದಾರೆ.