ಬೇಗುಸರಾಯ್ (ಬಿಹಾರ) :ಕೆಲವೊಂದು ವರದಿಗಳು ಓದ್ತಾ ಇದ್ರೆ ರಕ್ತಕುದಿಯುತ್ತೆ. ಭೂಮಿ ಮೇಲೆ ಇಂತಹ ಜನರು ಇದ್ದಾರಾ ಅಂತ ಪಿತ್ತ ನೆತ್ತಿಗೇರುತ್ತೆ. ಅಂಥದ್ದೇ ಒಂದು ಸುದ್ದಿ ಬಿಹಾರದಿಂದ ಹೊರ ಬಿದ್ದಿದೆ. ನರ್ಸರಿ ಓದುತ್ತಿರುವ ಇಬ್ಬರು ಪುಟ್ಟ ಬಾಲಕಿಯರ ಮೇಲೆ ಕೀಚಕ ಅತ್ಯಾಚಾರ ಮಾಡಿದ್ದಾನೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಕಿರಾತಕನನ್ನು ಬಂಧಿಸಲಾಗಿದೆ.
ಘಟನೆಯ ವಿವರ:ಬಿಹಾರದ ಬೇಗುಸರಾಯ್ನಲ್ಲಿ ಈ ಪ್ರಕರಣ ನಡೆದಿದೆ. ಶಾಲಾ ವಾಹನ ಚಾಲಕ ಅಮಾನುಷವಾಗಿ ಇಬ್ಬರು ಅಮಾಯಕ ಬಾಲಕಿಯರ ಮೇಲೆ ಪೈಶಾಚಿಕ ಕೃತ್ಯ ಎಸಗಿದವನು. ಪುಟ್ಟ ಮಕ್ಕಳನ್ನು ಅಸಭ್ಯವಾಗಿ ನಡೆಸಿಕೊಂಡಿದ್ದಲ್ಲದೇ, ಇದರ ವಿಡಿಯೋವನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಬುಧವಾರ ಶಾಲೆ ಮುಗಿದ ಬಳಿಕ ಮಕ್ಕಳನ್ನು ಮನೆಗೆ ಕರೆದೊಯ್ಯುವಾಗ ಸಂತ್ರಸ್ತ ಬಾಲಕಿಯರನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು, ಇಬ್ಬರ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ಆತನೇ ಬಾಲಕಿಯರನ್ನು ಮನೆಯ ಬಳಿ ಬಿಟ್ಟು ವಾಪಸಾಗಿದ್ದಾನೆ. ಮನೆಗೆ ತಲುಪಿದ ಕೂಡಲೇ ಬಾಲಕಿಯರಿಬ್ಬರ ಸ್ಥಿತಿ ಕಂಡು ಅವರ ಕುಟುಂಬದವರು ವಿಚಾರಿಸಿದಾಗ ಇಡೀ ಘಟನೆ ಬೆಳಕಿಗೆ ಬಂದಿದೆ.
ತಕ್ಷಣವೇ ಕುಟುಂಬಸ್ಥರು ಎಚ್ಚೆತ್ತು ಪರಾರಿಯಾಗುತ್ತಿದ್ದ ಸ್ಕೂಲ್ ವ್ಯಾನ್ ಚಾಲಕನನ್ನು ಗ್ರಾಮಸ್ಥರ ಸಹಾಯದಿಂದ ಹಿಡಿದಿದ್ದಾರೆ. ಬಳಿಕ ಪೊಲೀಸರಿಗೆ ವಿಷಯ ತಿಳಿಸಿ, ಆರೋಪಿಯನ್ನು ಒಪ್ಪಿಸಿದ್ದಾರೆ. ಈ ಘಟನೆಯು ಗ್ರಾಮದಲ್ಲಿ ಸಂಚಲನ ಸೃಷ್ಟಿಸಿದೆ. ಇಬ್ಬರೂ ಬಾಲಕಿಯರು ಸ್ನೇಹಿತರಾಗಿದ್ದು, ಸ್ವಲ್ಪ ದೂರದಲ್ಲೇ ಅವರ ನಿವಾಸಗಳಿವೆ. ಬಾಲಕಿಯರಿಬ್ಬರೂ 5 ವರ್ಷದವರಾಗಿದ್ದಾರೆ. ಖಾಸಗಿ ಶಾಲೆಯೊಂದರಲ್ಲಿ ನರ್ಸರಿ ಅಭ್ಯಾಸ ಮಾಡುತ್ತಿದ್ದಾರೆ.