ಕರ್ನಾಟಕ

karnataka

ETV Bharat / bharat

ಗೋಡೆ ಕೊರೆದು ಒಳ ನುಗ್ಗಿದ ಚಾಲಾಕಿಗಳು.. ₹25 ಕೋಟಿ ಮೌಲ್ಯದ ಚಿನ್ನಾಭರಣ ಕದ್ದ ಖದೀಮರು!

ದೆಹಲಿಯ ಜಂಗ್​ಪುರದ ಆಭರಣ ಮಳಿಗೆಯೊಂದಕ್ಕೆ ಸಿನಿಮೀಯ ರೀತಿ ನುಗ್ಗಿದ ಕಳ್ಳರು ಅಪಾರ ಪ್ರಮಾಣದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

crime-thieves-cut-stores-wall-steal-jewellery-worth-crores-in-delhi
ದೆಹಲಿಯಲ್ಲಿ ₹25 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು!

By ETV Bharat Karnataka Team

Published : Sep 26, 2023, 6:31 PM IST

ನವದೆಹಲಿ:ದೆಹಲಿಯ ಹಜರತ್ ನಿಜಾಮುದ್ದೀನ್ ಪೊಲೀಸ್ ಠಾಣೆ ವ್ಯಾಪ್ತಿಯ ಜಂಗ್​ಪುರದ ಆಭರಣ ಮಳಿಗೆಯೊಂದಕ್ಕೆ ನುಗ್ಗಿದ ಖದೀಮರು ಅಪಾರ ಪ್ರಮಾಣದ ಚಿನ್ನಾಭರಣ ದೋಚಿರುವ ಘಟನೆ ನಡೆದಿದೆ. ಉಮ್ರಾವ್ ಸಿಂಗ್ ಜ್ಯುವೆಲ್ಲರ್ಸ್​ನಲ್ಲಿ ಸುಮಾರು 20 ರಿಂದ 25 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ವಿವಿಧ ಪೊಲೀಸ್​ ತಂಡಗಳು ಆಗಮಿಸಿ ಪರಿಶೀಲನೆ ನಡೆಸಿವೆ. ಮಳಿಗೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಗಳನ್ನು ಆಧರಿಸಿ ತನಿಖೆ ಕೈಗೊಂಡಿದ್ದಾರೆ.

ಇಂದು ಬೆಳಗ್ಗೆ ಅಂಗಡಿ ಮಾಲೀಕ ಮಳಿಗೆಯನ್ನು ತೆರೆದಾಗ ಪ್ರಕರಣ ಬೆಳಕಿಗೆ ಬಂದಿದೆ. ಖದೀಮರು ಮಳಿಗೆಯ ಗೋಡೆಯನ್ನು ಕೊರೆದು ಒಳ ನುಗ್ಗಿ ತಮ್ಮ ಕೈಚಳಕ ತೋರಿಸಿದ್ದಾರೆ. ಈ ಸಂಬಂಧ ಪೊಲೀಸರು ಅಂಗಡಿ ಮಾಲೀಕನ ವಿಚಾರಣೆ ನಡೆಸುತ್ತಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳೀಯ ಪೊಲೀಸರು, ಪಿಸಿಆರ್ ತಂಡ ಹಾಗೂ ಅಪರಾಧ ಮತ್ತು ವಿಧಿವಿಜ್ಞಾನ ತಂಡ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿವೆ. ಸದ್ಯ ಪೊಲೀಸರ ತಂಡ ಮಳಿಗೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದ ದೃಶ್ಯಾವಳಿಗಳನ್ನು ಪರಿಶೀಲಿಸಿ ತನಿಖೆ ಮುಂದುವರೆಸಿದ್ದಾರೆ.

ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿರುವುದಕ್ಕೆ ಪೊಲೀಸರ ವಿರುದ್ಧ ಚಿನ್ನಾಭರಣ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರಂತರ ಕಳ್ಳತನವಾಗುತ್ತಿರುವ ಬಗ್ಗೆ ಚಿನ್ನಾಭರಣ ವ್ಯಾಪಾರಿಗಳ ಸಂಘ ಶೀಘ್ರದಲ್ಲೇ ಪೊಲೀಸ್ ಆಯುಕ್ತರನ್ನು ಭೇಟಿ, ಮನವಿ ನೀಡಲಿದ್ದೇವೆ ಎಂದು ವ್ಯಾಪಾರಿಗಳು ತಿಳಿಸಿದರು. ಪ್ರಕರಣ ಸಂಬಂಧ ಡಿಸಿಪಿ ರಾಜೇಶ್ ದೇವ್ ಯಾವುದೇ ಮಾಹಿತಿ ನೀಡಿಲ್ಲ.

ಅಂಗಡಿ ಮಾಲೀಕ ಹೇಳಿದ್ದೇನು?:ನಾವು ಭಾನುವಾರ ಅಂಗಡಿಯನ್ನು ಮುಚ್ಚಿದ್ದೆವು. ಮಂಗಳವಾರ ಬೆಳಗ್ಗೆ ನಾವು ಅಂಗಡಿಯನ್ನು ತೆರೆದು ನೋಡಿದಾಗ ಕಳ್ಳರು ಸ್ಟ್ರಾಂಗ್ ರೂಮ್​ನ ಗೋಡೆ ಕೊರೆದು ಕಳ್ಳತನ ಮಾಡಿರುವುದು ಕಂಡುಬಂದಿದೆ. 5 ರಿಂದ 7 ಲಕ್ಷ ನಗದು ಸೇರಿದಂತೆ ಸುಮಾರು 20 ರಿಂದ 25 ಕೋಟಿ ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಲಾಗಿದೆ. ಕಳ್ಳರು ಸಿಸಿಟಿವಿ ಕ್ಯಾಮರಾವನ್ನು ಸಹ ಹಾನಿಗೊಳಿಸಿದ್ದಾರೆ. ನಮ್ಮ ಎಲ್ಲಾ ಉದ್ಯೋಗಿಗಳು ಇಲ್ಲಿಯೇ ಇದ್ದಾರೆ ಎಂದು ಅಂಗಡಿ ಮಾಲೀಕ ತಿಳಿಸಿದ್ದಾರೆ.

ಇದನ್ನೂ ಓದಿ:ದೊಡ್ಡಬಳ್ಳಾಪುರ: ಎರಡು ದೇವಸ್ಥಾನಗಳಲ್ಲಿ 5 ಮಾಂಗಲ್ಯ ಸರ, 18 ಚಿನ್ನ ಗುಂಡುಗಳು ಕಳವು

ABOUT THE AUTHOR

...view details