ಚೆನ್ನೈ (ತಮಿಳುನಾಡು): ಮಹಿಳಾ ಐಪಿಎಸ್ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪದ ಮೇಲೆ ಅಮಾನತುಗೊಂಡಿರುವ ತಮಿಳುನಾಡಿನ ಹಿರಿಯ ಐಪಿಎಸ್ ಅಧಿಕಾರಿ ರಾಜೇಶ್ ದಾಸ್ ಅವರಿಗೆ ವಿಲ್ಲುಪುರಂ ನ್ಯಾಯಾಲಯ ಶುಕ್ರವಾರ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಇದೇ ವೇಳೆ ರಾಜೇಶ್ ದಾಸ್ ಅವರಿಗೆ ನ್ಯಾಯಾಲಯ ಜಾಮೀನು ನೀಡಿದ್ದು, ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಿದೆ.
2021ರ ಫೆಬ್ರವರಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಅಂದಿನ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ಭದ್ರತಾ ಕರ್ತವ್ಯದಲ್ಲಿ ಡಿಜಿಪಿ ಶ್ರೇಣಿಯ ಅಧಿಕಾರಿಯಾಗಿದ್ದ ರಾಜೇಶ್ ದಾಸ್ ಹಾಗೂ ಯುವ ಮಹಿಳಾ ಐಪಿಎಸ್ ಅಧಿಕಾರಿಯನ್ನು ನಿಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಮಹಿಳಾ ಅಧಿಕಾರಿಗೆ ರಾಜೇಶ್ ದಾಸ್ ಕಿರುಕುಳ ನೀಡಿದ್ದಾರೆ ಎಂದು ಆರೋಪ ಮಾಡಲಾಗಿತ್ತು. ಆಗ ರಾಜೇಶ್ ದಾಸ್ ಕಾನೂನು ಮತ್ತು ಸುವ್ಯವಸ್ಥೆಯ ವಿಶೇಷ ಡಿಜಿಪಿ ಆಗಿದ್ದರು.
ಭದ್ರತಾ ವ್ಯವಸ್ಥೆಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ರಾಜೇಶ್ ದಾಸ್ ಭದ್ರತಾ ವ್ಯವಸ್ಥೆಗಳ ಬಗ್ಗೆ ಸಲಹೆ ನೀಡುವ ಹೆಸರಿನಲ್ಲಿ ಮಹಿಳಾ ಐಪಿಎಸ್ ಅಧಿಕಾರಿಯನ್ನು ಕಾರಿನಲ್ಲಿ ಕರೆದೊಯ್ದಾಗ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಲಾಗಿತ್ತು. ಇದರ ಬೆನ್ನಲ್ಲೇ ಸಂತ್ರಸ್ತ ಎಸ್ಪಿ ತಮಿಳುನಾಡು ಸರ್ಕಾರದ ಗೃಹ ಕಾರ್ಯದರ್ಶಿ ಹಾಗೂ ಅಂದಿನ ಪೊಲೀಸ್ ಡಿಜಿಪಿ ತ್ರಿಪಾಠಿ ಅವರಿಗೆ ದೂರು ಸಲ್ಲಿಸಿದ್ದರು. ಇದರ ಆಧಾರದ ಮೇಲೆ ರಾಜೇಶ್ ದಾಸ್ ಅವರಿಗೆ ತಮಿಳುನಾಡು ಸರ್ಕಾರವು ಕಡ್ಡಾಯ ರಜೆ ಮೇಲೆ ಕಳುಹಿಸಿತ್ತು. ಬಳಿಕ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು.