ಮಹಾರಾಷ್ಟ್ರ:ಪುಣೆ ಜಿಲ್ಲೆಯ ಖಾಸಗಿ ಶಾಲೆಯೊಂದರ ಬಾಲಕಿಯರ ವಾಶ್ ರೂಂನಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ ಎಂದು ಕೆಲವು ಪೋಷಕರು ಗಂಭೀರ ಆರೋಪ ಮಾಡಿದ್ದು, ಶಾಲೆಯ ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿದ್ದಾರೆ. ಮಂಗಳವಾರ ಮಧ್ಯಾಹ್ನ ನಡೆದ ಈ ಘಟನೆಯ ವಿಡಿಯೋ ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ತಲೇಗಾಂವ್ ದಭಾಡೆ ಪ್ರದೇಶದ ಶಾಲಾ ಆವರಣದಲ್ಲಿ ಬಲಪಂಥೀಯ ಗುಂಪೊಂದು ಪ್ರಾಂಶುಪಾಲರನ್ನು ಹಿಂಬಾಲಿಸುತ್ತಿರುವ ದೃಶ್ಯವಿದೆ. ಘಟನೆ ಕುರಿತು ಶಿಕ್ಷಣ ಇಲಾಖೆ ತನಿಖೆ ನಡೆಸುತ್ತಿದೆ. ಆದರೆ ಗುರುವಾರ ಸಂಜೆಯವರೆಗೂ ಯಾವುದೇ ಪ್ರಕರಣ (ಎಫ್‌ಐಆರ್) ದಾಖಲಾಗಿಲ್ಲ.
ಪೋಷಕರ ಆರೋಪವೇನು?:ಶಾಲೆಯ ವಿದ್ಯಾರ್ಥಿನಿಯರ ವಾಶ್ ರೂಂನಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಬೈಬಲ್ ಪ್ರಾರ್ಥನೆ ನಡೆಸಿದ್ದಾರೆ. ಹಿಂದೂ ಹಬ್ಬಗಳಿಗೆ ರಜೆ ಘೋಷಿಸಿಲ್ಲ ಎಂದು ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಾಳೆಗಾಂವ್ ಎಂಐಡಿಸಿ ಪೊಲೀಸ್ ಇನ್ಸ್‌ಪೆಕ್ಟರ್ ರಂಜಿತ್ ಸಾವಂತ್ ತಿಳಿಸಿದರು. ಪಾಲಕರು ಮಾಡಿರುವ ಆರೋಪಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ತನಿಖೆ ನಡೆಯುತ್ತಿದೆ.
ಪೋಷಕರಾದ ದೀಪ್ತಿ ಖರ್ಮಲೆ ಮಾತನಾಡಿ, "ಶಾಲಾ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಅನಗತ್ಯ ಒತ್ತಡ ಹೇರುವುದಲ್ಲದೇ ಪೀಠೋಪಕರಣಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸುವಂತೆ ಕೇಳುವುದು ಮುಂತಾದ ಹಲವು ಕೆಲಸಗಳನ್ನೂ ಮಾಡಿಸುತ್ತಿದ್ದಾರೆ. ನಾವು ಈ ವಿಷಯ ಪ್ರಸ್ತಾಪಿಸಿದಾಗಲೆಲ್ಲ ಪ್ರಾಂಶುಪಾಲರು ನಮ್ಮ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಾರೆ" ಎಂದರು.