ಪ್ರಯಾಗ್‌ರಾಜ್ (ಉತ್ತರ ಪ್ರದೇಶ) : 10 ದಿನಗಳ ಹಿಂದಷ್ಟೆ ಜೈಲಿನಿಂದ ಬಿಡುಗಡೆಯಾಗಿದ್ದ ಇಲ್ಲಿನ ರೌಡಿಶೀಟರ್‌ವೊರ್ವ ತನ್ನ ಹಳೆಯ ಚಾಳಿಯನ್ನೇ ಮುಂದುವರೆಸಿದ್ದಾನೆ. ರಾಜಾಬಾಬು ಎಂಬಾತ ಪ್ರಯಾಗ್‌ರಾಜ್ ಜಿಲ್ಲೆಯ ಥಾರ್ವಾಯ್‌ನ ಪಡಿಲಾ ಎಂಬ ಗ್ರಾಮದಲ್ಲಿ 6 ಮಂದಿಗೆ ಚಾಕುವಿನಿಂದ ಜನರಿಗೆ ಇರಿದು ಗಾಯಗೊಳಿಸಿದ್ದಾನೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋಪಗೊಂಡ ಜನರು ರಾಜಾ ಬಾಬುನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಾಳು ಆರೋಪಿಯನ್ನು ಇಲ್ಲಿನ ಎಸ್ಆರ್ಎನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಂಪೂರ್ಣ ವಿವರ: ತರವಾಯಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡಿಲಾ ಗ್ರಾಮದ ರಾಜಾ ಬಾಬು ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ. ಕೆಲವು ತಿಂಗಳ ಹಿಂದೆ ಪೊಲೀಸ್ ಎನ್‌ಕೌಂಟರ್‌ನಲ್ಲಿ ಈತನ ಕಾಲಿಗೆ ಗುಂಡು ತಗುಲಿತ್ತು. ಚಿಕಿತ್ಸೆಯ ಬಳಿಕ ಜೈಲಿಗೆ ಕಳುಹಿಸಲಾಗಿತ್ತು. ಹತ್ತು ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದನು. ಈತನ ಗ್ರಾಮದ ಕಾರ್ಮಿಕ ಲಾಲ್ಜಿ ಭಾರತಿಯ ಎಂಬಾತ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ವಾಗ್ವಾದ ನಡೆಸಿದ್ದಾನೆ. ಇಬ್ಬರ ನಡುವೆ ಗಲಾಟೆ ನಡೆದು ರಾಜಾ ಬಾಬು ಲಾಲ್ಜಿಯನ್ನು ಥಳಿಸಿದ್ದಾನೆ.