ಕರ್ನಾಟಕ

karnataka

ETV Bharat / bharat

ನಿಜಾಮಾಬಾದ್​ ಭಯೋತ್ಪಾದನೆ ಸಂಚು ಕೇಸ್: ಕರ್ನಾಟಕದಲ್ಲಿ ಅಡಗಿದ್ದ PFI ಶಸ್ತ್ರಾಸ್ತ್ರ ತರಬೇತುದಾರ​ ಅರೆಸ್ಟ್​ - ಬಳ್ಳಾರಿ ಜಿಲ್ಲೆಯ ಕೌಲ್ ಬಜಾರ್ ಪ್ರದೇಶ

ತೆಲಂಗಾಣದ ನಿಜಾಮಾಬಾದ್​ ಭಯೋತ್ಪಾದನೆ ಸಂಚು ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಯೋರ್ವ ಬಳ್ಳಾರಿ ಜಿಲ್ಲೆಯ ಕೌಲ್ ಬಜಾರ್ ಪ್ರದೇಶದಲ್ಲಿ ತಲೆಮರೆಸಿಕೊಂಡಿರುವುದು ಪತ್ತೆಯಾಗಿದ್ದು, ಈತನನ್ನು ಬಂಧಿಸಿರುವುದಾಗಿ ಎನ್‌ಐಎ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

Crime Nizamabad terror conspiracy case: NIA arrests PFI master weapon trainer
ನಿಜಾಮಾಬಾದ್​ ಭಯೋತ್ಪಾದನೆ ಸಂಚು ಕೇಸ್: ಕರ್ನಾಟಕದಲ್ಲಿ ಅಡಗಿದ್ದ PFI ಶಸ್ತ್ರಾಸ್ತ್ರ ಟ್ರೈನರ್​ ಅರೆಸ್ಟ್​

By

Published : Jun 14, 2023, 9:36 PM IST

Updated : Jun 14, 2023, 11:00 PM IST

ನವದೆಹಲಿ: ತೆಲಂಗಾಣದ ನಿಜಾಮಾಬಾದ್​ನಲ್ಲಿ ಭಯೋತ್ಪಾದನೆಗೆ ಸಂಚು ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಮಾಸ್ಟರ್‌ ಶಸ್ತ್ರಾಸ್ತ್ರ ತರಬೇತುದಾರನೋರ್ವನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ. ಆಂಧ್ರ ಪ್ರದೇಶದ ನಂದ್ಯಾಲ ಜಿಲ್ಲೆಯ 33 ವರ್ಷದ ನೋಸಮ್ ಮೊಹಮ್ಮದ್ ಯೂನಸ್ ಅಲಿಯಾಸ್ ಯೂನಸ್ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಈತ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಕೌಲ್ ಬಜಾರ್ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದಲ್ಲಿ ಇಸ್ಲಾಮಿಕ್ ಆಳ್ವಿಕೆಯನ್ನು ಸ್ಥಾಪಿಸುವ ಉದ್ದೇಶದೊಂದಿಗೆ ಭಯೋತ್ಪಾದಕ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದ್ದ. ಈ ಕೃತ್ಯಗಳನ್ನು ನಿರ್ವಹಿಸಲು ಯುವಕರನ್ನು ನೇಮಕ ಹಾಗೂ ಅವರನ್ನು ಮೂಲಭೂತವಾದಿಗಳನ್ನಾಗಿ ಪರಿವರ್ತಿಸಿ ಅವರಿಗೆ ಶಸ್ತ್ರಾಸ್ತ್ರ ತರಬೇತಿಯನ್ನು ನೀಡಲು ನಿಷೇಧಿತ ಸಂಘಟನೆಯಾದ ಪಿಎಫ್‌ಐಯ ನಾಯಕರು ಮತ್ತು ಕಾರ್ಯಕರ್ತರು ಸಂಚು ರೂಪಿಸಿರುವ ಆರೋಪ ಇದೆ. ಇದಕ್ಕೆ ಸಂಬಂಧಿಸಿದ ಕ್ರಿಮಿನಲ್ ಪಿತೂರಿ ಪ್ರಕರಣದಲ್ಲಿ ಮೊಹಮ್ಮದ್ ಯೂನಸ್ ಹಾಗೂ ಇನ್ವರ್ಟರ್ ವ್ಯವಹಾರದಲ್ಲಿ ಕೆಲಸ ಮಾಡುತ್ತಿದ್ದ ಈತನ ಅಣ್ಣನನ್ನೂ ಬಂಧಿಸಲಾಗಿದೆ.

ಇದನ್ನೂ ಓದಿ:ನಿಷೇಧಿತ ಪಿಎಫ್‌ಐ ಪ್ರಕರಣ: ತಮಿಳುನಾಡು ಸೇರಿದಂತೆ ದೇಶದ ಹಲವೆಡೆ ಎನ್‌ಐಎ ಶೋಧ

ಬಳ್ಳಾರಿಯಲ್ಲಿ ಮೊಕ್ಕಾಂ, ಹೆಸರು - ವೃತ್ತಿ ಎರಡೂ ಬದಲು: 2022ರ ಸೆಪ್ಟೆಂಬರ್​ನಲ್ಲಿ ಯೂನಸ್ ಮನೆಯನ್ನು ಶೋಧ ಕಾರ್ಯ ನಡೆಸಲಾಗಿತ್ತು. ಆಗ ತನ್ನ ಹೆಂಡತಿ ಮತ್ತು ಇಬ್ಬರು ಅಪ್ರಾಪ್ತ ಪುತ್ರರೊಂದಿಗೆ ಪರಾರಿಯಾದ್ದ. ಇಡೀ ಕುಟುಂಬವನ್ನು ಆಂಧ್ರ ಪ್ರದೇಶದಿಂದ ಸ್ಥಳಾಂತರಿಸಿ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಕೌಲ್ ಬಜಾರ್ ಪ್ರದೇಶದಲ್ಲಿ ಅಡಿ ತಲೆಮರೆಸಿಕೊಂಡಿದ್ದ. ಅಲ್ಲಿ ಬಶೀರ್ ಎಂಬ ಹೊಸ ಹೆಸರಿಟ್ಟುಕೊಂಡು ಪ್ಲಂಬರ್ ಆಗಿ ಹೊಸ ಕೆಲಸ ಮಾಡಲು ಶುರು ಮಾಡಿದ್ದ ಎಂದು ಎನ್‌ಐಎ ತನಿಖೆಯಿಂದ ತಿಳಿದು ಬಂದಿದೆ.

ಬಂಧಿತ ಯೂನಸ್ ಮಾಸ್ಟರ್ ಶಸ್ತ್ರಾಸ್ತ್ರ ತರಬೇತುದಾರನಾಗಿದ್ದಾನೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣ ಪ್ರದೇಶದಲ್ಲಿ ಪಿಎಫ್‌ಐನಿಂದ ನೇಮಕಗೊಂಡ ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದ. ನಿಜಾಮಾಬಾದ್ ಪಿಎಫ್‌ಐ ಪ್ರಕರಣದಲ್ಲಿ ಈ ಎರಡು ರಾಜ್ಯಗಳಿಗೆ ತರಬೇತಿ ರಾಜ್ಯ ಸಂಯೋಜಕರಾಗಿದ್ದ. ವಿಚಾರಣೆಯ ವೇಳೆ ನುಣುಚಿಕೊಳ್ಳುವ ಉತ್ತರಗಳನ್ನು ನೀಡುತ್ತಿರುವ ಯೂನಸ್, ಶೇಖ್ ಇಲಿಯಾಸ್ ಅಹ್ಮದ್ ಎಂಬಾತ ಕೂಡ ಪಿಎಫ್‌ಐ ಶಸ್ತ್ರಾಸ್ತ್ರ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾನೆ ಎಂಬ ಬಾಯ್ಬಿಟ್ಟಿದ್ದಾನೆ. ಸದ್ಯ ಈ ಇಲಿಯಾಸ್ ತಲೆಮರೆಸಿಕೊಂಡಿದ್ದಾನೆ ಎಂದು ಎನ್‌ಐಎ ತಿಳಿಸಿದೆ.

ನಿಜಾಮಾಬಾದ್​ ಭಯೋತ್ಪಾದನೆಗೆ ಸಂಚು ಪ್ರಕರಣ ಸಂಬಂಧ ಆರಂಭದಲ್ಲಿ ಕಳೆದ ವರ್ಷ ಜುಲೈ 4ರಂದು ತೆಲಂಗಾಣ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಬಳಿಕ ಎನ್‌ಐಎ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಇದುವರೆಗೆ 16 ಆರೋಪಿಗಳ ವಿರುದ್ಧ ಎನ್‌ಐಎ ಎರಡು ಆರೋಪಪಟ್ಟಿ ಸಲ್ಲಿಸಿದೆ.

ಇದನ್ನೂ ಓದಿ:ಭಯೋತ್ಪಾದನೆ ಆರೋಪ.. ಏಳು ವರ್ಷದಿಂದ ಜೈಲಿನಲ್ಲಿದ್ದ ಭಟ್ಕಳದ ವ್ಯಕ್ತಿ ನ್ಯಾಯಾಲಯದಿಂದ ಖುಲಾಸೆ

Last Updated : Jun 14, 2023, 11:00 PM IST

ABOUT THE AUTHOR

...view details