ಹಾಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಮತ್ತೊಂದು ದುಷ್ಕೃತ್ಯ ಬೆಳಕಿಗೆ ಬಂದಿದೆ. ಪ್ರೇಮ ಪ್ರಕರಣ ಸಂಬಂಧ ಯುವತಿಯೊಬ್ಬಳನ್ನು ಆಕೆಯ ತಾಯಿ ಹಾಗೂ ಸಹೋದರ ಸೇರಿಕೊಂಡು ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟು ಹಾಕಲು ಯತ್ನಿಸಿದ ಘಟನೆ ಹಾಪುರ ಜಿಲ್ಲೆಯಲ್ಲಿ ಗುರುವಾರ ನಡೆದಿದೆ. ಇದೊಂದು ಮರ್ಯಾದಾ ಹತ್ಯೆ ಯತ್ನ ಪ್ರಕರಣ ಎಂದು ಶಂಕಿಸಲಾಗಿದೆ.
ಇಲ್ಲಿನ ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ನವಾಡ ಖುರ್ದ್ ಗ್ರಾಮದ ಯುವತಿಯೊಬ್ಬಳು ಅದೇ ಗ್ರಾಮ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಷಯ ತಿಳಿದ ತಾಯಿ ಹಾಗೂ ಸಹೋದರ ಆಕ್ರೋಶಗೊಂಡಿದ್ದರು. ಅಂತೆಯೇ, ಯುವತಿಯನ್ನು ಹೊಲಕ್ಕೆ ಕರೆದೊಯ್ದು ಮನಸೋಇಚ್ಛೆ ಥಳಿಸಿದ್ದಾರೆ. ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಯುವತಿಯನ್ನು ಜೀವಂತವಾಗಿ ಸುಟ್ಟು ಹಾಕಲು ಪ್ರಯತ್ನಿಸಿದ್ದಾರೆ. ಬೆಂಕಿ ಹೊತ್ತಿಕೊಂಡಾಗ ಯುವತಿ ಹೊಲದ ತುಂಬಾ ಓಡತೊಡಗಿದ್ದಳು. ಸಹಾಯಕ್ಕಾಗಿ ಅಂಗಲಾಚಿದ್ದಾಳೆ. ಆದರೆ, ಆ ಸಮಯದಲ್ಲಿ ಜಮೀನಿನಲ್ಲಿ ಬೇರೆ ಯಾರೂ ಇರಲಿಲ್ಲ. ಬಳಿಕ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದಾರೆ.
ಈ ವೇಳೆ, ಗ್ರಾಮಸ್ಥರೊಬ್ಬರು ಯುವತಿ ಬೆಂಕಿಯಲ್ಲಿ ನರಳುತ್ತಿರುವ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿ ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಸಂತ್ರಸ್ತೆ ಸುಮಾರು 70ರಷ್ಟು ಸುಟ್ಟು ಗಾಯಗೊಂಡಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾಳೆ. ಮತ್ತೊಂದೆಡೆ, ಈ ಘಟನೆ ಬಳಿಕ ಆರೋಪಿ ತಾಯಿ ಮತ್ತು ಸಹೋದರ ಸ್ಥಳದಿಂದ ಓಡಿ ಹೋಗಲು ಆರಂಭಿಸಿದ್ದರು. ಆದರೆ, ಗ್ರಾಮಸ್ಥರೇ ಆರೋಪಿಗಳಿಬ್ಬರನ್ನೂ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.