ಆಗ್ರಾ (ಉತ್ತರ ಪ್ರದೇಶ):ತಾಜ್ ನಗರದ ಹೋಮ್ ಸ್ಟೇಯಲ್ಲಿ ಮಹಿಳಾ ಉದ್ಯೋಗಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಪ್ರಕರಣಕ್ಕೆ ಸಂಬಂಧಿಸಿದ ಏಳು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಐವರು ಆರೋಪಿಗಳ ಬಂಧನ:ಸಂತ್ರಸ್ತೆಯು ಅಳುತ್ತಾ, ''ದಯವಿಟ್ಟು ನನಗೆ ಸಹಾಯ ಮಾಡಿ, ನನ್ನನ್ನು ಉಳಿಸಿ, ನನಗೆ ಹೆತ್ತವರಿಲ್ಲ, ನಾನು ಪೋಷಕರಿಲ್ಲದೆ ವಾಸ ಮಾಡುತ್ತಿದ್ದೇನೆ. ದಯವಿಟ್ಟು ನನ್ನನ್ನು ಬಿಟ್ಟುಬಿಡಿ, ನನಗೆ ನಾಲ್ಕು ಪುಟ್ಟ ಹೆಣ್ಣು ಮಕ್ಕಳಿದ್ದಾರೆ. ನನಗೇನಾದರೂ ಅಪಾಯ ಆದಲ್ಲಿ ಅವರನ್ನು ನೋಡಿಕೊಳ್ಳುವವರು ಯಾರು?'' ಎಂದು ಸಂತ್ರಸ್ತೆ ಕೈಜೋಡಿಸಿ ಮನವಿ ಮಾಡುತ್ತಿರುವುದು ವಿಡಿಯೋದಲ್ಲಿದೆ. ಆದ್ರೆ, ಇದ್ಯಾವುದನ್ನು ಕಿವಿಗೆ ಹಾಕಿಕೊಳ್ಳದ ಕಾಮುಕರು ಮಹಿಳೆಯನ್ನು ಬಲವಂತವಾಗಿ ಕೊಠಡಿಗೆ ಎಳೆದೊಯ್ದು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಸಂತ್ರಸ್ತೆ ಮೇಲೆ ಹಲ್ಲೆ:ತಾಜ್ ನಗರದ ಹೋಮ್ ಸ್ಟೇಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಶನಿವಾರ (ನ.11 ರಂದು) ತಡರಾತ್ರಿ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ. ಈ ಕೃತ್ಯವನ್ನು ವಿರೋಧಿಸಿದ ಸಂತ್ರಸ್ತೆ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಮಹಿಳೆ ಜೋರಾಗಿ ಕಿರುಚುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಾಜ್‌ಗಂಜ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಜಿತೇಂದ್ರ ರಾಥೋಡ್, ರವಿ ರಾಥೋಡ್, ಮನೀಶ್ ಕುಮಾರ್ ಮತ್ತು ದೇವ್ ಕಿಶೋರ್ನನ್ನು ಬಂಧಿಸಿದ್ದಾರೆ.
ಪೊಲೀಸರು ಹೇಳಿದ್ದೇನು?:''ಮಹಿಳೆಗೆ ಮದ್ಯ ಕುಡಿಸಿ, ಅಶ್ಲೀಲ ವಿಡಿಯೋ ಮಾಡಿದ ಆರೋಪವಿದೆ. ನಂತರ ಹೋಂ ಸ್ಟೇಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ. ಈ ಮಹಿಳೆಯು ಕಳೆದ ಒಂದೂವರೆ ವರ್ಷಗಳಿಂದ ಹೋಂ ಸ್ಟೇಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಆರೋಪಿ ಜಿತೇಂದ್ರ ಸಂತ್ರಸ್ತೆಗೆ ಪರಿಚಯಸ್ಥ. ಈ ಹಿಂದೆ ಮೋಸದಿಂದ ಆಕೆಯ ಅಶ್ಲೀಲ ವಿಡಿಯೋ ಮಾಡಿದ್ದ. ಅದೇ ವಿಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಸಿ ಬಹಳ ದಿನಗಳಿಂದ ಮಹಿಳೆಗೆ ಕಿರುಕುಳ ನೀಡುತ್ತಿದ್ದ. ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ಹಣ ವಸೂಲಿ ಮಾಡಿದ್ದಾರೆ ಎಂದು ಸಂತ್ರಸ್ತೆ ದೂರು ನೀಡಿದ್ದಾಳೆ. ಶನಿವಾರ ರಾತ್ರಿಯೂ ಅದೇ ವಿಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಈ ಕೃತ್ಯದಲ್ಲಿ ಆರೋಪಿ ಜಿತೇಂದ್ರ ಜೊತೆಗೆ ಇತರ ಆರೋಪಿಗಳು ಭಾಗಿಯಾಗಿದ್ದಾರೆ'' ಎಂದು ನಗರ ಡಿಸಿಪಿ ಸೂರಜ್ ಕುಮಾರ್ ರೈ ತಿಳಿಸಿದ್ದಾರೆ.
ಇದನ್ನೂ ಓದಿ:ಗ್ಯಾರೇಜ್ನಲ್ಲಿ ಭೀಕರ ಅಗ್ನಿ ಅವಘಡ: ನಾಲ್ಕುದಿನದ ಮಗು, ಮಹಿಳೆ ಸೇರಿ 9 ಜನ ಸಜೀವದಹನ