ಬಲರಾಂಪುರ (ಉತ್ತರ ಪ್ರದೇಶ):ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯಲ್ಲಿ ಆಘಾತಕಾರಿ ಪ್ರಕರಣವೊಂದು ವರದಿಯಾಗಿದೆ. ಆಟದ ವೇಳೆ ತನ್ನ ಮಗಳಿಗೆ ಥಳಿಸಿದ ಕಾರಣದಿಂದ ಕೋಪಗೊಂಡ ವ್ಯಕ್ತಿಯೋರ್ವ ಎಂಟು ವರ್ಷದ ಬಾಲಕಿಯನ್ನು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
30 ವರ್ಷದ ಕರಣ್ ಸೋನಿ ಎಂಬಾತನೇ ಬಾಲಕಿಯ ಕೊಂದ ಆರೋಪಿ ಎಂದು ಗುರುತಿಸಲಾಗಿದೆ. ಎರಡು ದಿನಗಳ ಹಿಂದೆ ಈ ಆರೋಪಿ ತನ್ನದೇ ಸಂಬಂಧಿಕರೊಬ್ಬರ ಎಂಟು ವರ್ಷದ ಮಗಳನ್ನು ನಿರ್ಜನ ಪ್ರದೇಶದಲ್ಲಿ ಹತ್ಯೆ ಮಾಡಿದ್ದಾನೆ. ಅಲ್ಲದೇ, ಮೃತದೇಹವನ್ನು ಚರಂಡಿಗೆ ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ. ಶುಕ್ರವಾರ ಬಾಲಕಿಯ ಶವ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಡೆದಿದ್ದೇನು?:ಬಲರಾಂಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಲಕಿ ಗುರುವಾರ ಸಂಜೆ ಆಟವಾಡುತ್ತಿದ್ದಾಗ ಏಕಾಏಕಿ ನಾಪತ್ತೆಯಾಗಿದ್ದಳು. ಇದರಿಂದ ಆಘಾತಗೊಂಡ ಬಾಲಕಿಯ ಕುಟುಂಬಸ್ಥರು ಪೊಲೀಸರಿಗೆ ದೂರು ಕೊಟ್ಟಿದ್ದರು. ಇದರಿಂದ ಪೊಲೀಸರು ಸಾಕಷ್ಟು ಶೋಧ ಕಾರ್ಯ ಕೈಗೊಂಡಿದ್ದರು. ಈ ವೇಳೆ, ಶುಕ್ರವಾರ ಸಂಜೆ ಬಾಲಗಂಜ್ ಬಂಧೆ ಕಾಲುವೆ ಬಳಿಯ ನೀರಿನ ಕೊಚ್ಚೆಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ.
ಮತ್ತೊಂದೆಡೆ, ಬಾಲಕಿ ಸಾವಿನ ಕುರಿತು ಪೊಲೀಸರು ಹಚ್ಚಿನ ಕೈಗೊಂಡಿದ್ದಾರೆ. ಇದರೊಂದಿಗೆ ಬಾಲಕಿಯ ಶೋಧ ಕಾರ್ಯದ ವೇಳೆ ಪೊಲೀಸರಿಗೆ ಹಲವು ಮಹತ್ವದ ಸುಳಿವು ಸಿಕ್ಕಿದ್ದವು. ಇದರ ಆಧಾರದ ಮೇಲೆ ಪೊಲೀಸರು ಸಂಬಂಧಿಯಾದ ಕರಣ್ ಸೋನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ, ಕೃತ್ಯವನ್ನು ಆರೋಪಿ ಒಪ್ಪಿಕೊಂಡಿದ್ದಾನೆ. ಜೊತೆಗೆ ಮತ್ತಷ್ಟು ಆಘಾತಕಾರಿ ಅಂಶಗಳನ್ನು ಬಾಯ್ಬಿಟ್ಟಿದ್ದಾನೆ.
ಮಗಳಿಗೆ ಥಳಿಸಿದ್ದಕ್ಕೆ ಬಾಲಕಿಯ ಕೊಲೆ:ಆರೋಪಿ ಕರಣ್ ಸೋನಿಗೂ ಮಗಳಿದ್ದಾಳೆ. ಮೃತ ಎಂಟು ವರ್ಷದ ಬಾಲಕಿ ಹಾಗೂ ಕರಣ್ ಸೋನಿಯ ಪುತ್ರಿ ಇಬ್ಬರು ಒಟ್ಟಿಗೆ ಆಟವಾಡುತ್ತಿದ್ದರು. ಈ ಸಮಯದಲ್ಲಿ ಬಾಲಕಿ ತನ್ನ ಮಗಳಿಗೆ ಆಗಾಗ್ಗೆ ಸತಾಯಿಸುತ್ತಿದ್ದಳು. ಕೆಲವೊಮ್ಮೆ ಮುಖಕ್ಕೆ ಗೀಚುತ್ತಿದ್ದಳು ಹಾಗೂ ಒಮ್ಮೆ ಕಪಾಳಕ್ಕೆ ಬಾಲಕಿ ಹೊಡೆದಿದ್ದಳು. ಅಲ್ಲದೇ, ಮುಖಕ್ಕೆ ಗೀಚಿದ್ದರಿಂದ ಸೋಂಕು ಹರಡಿತ್ತು. ಇದರಿಂದ ಕರಣ್ ಸೋನಿ ಕೋಪಗೊಂಡಿದ್ದ. ಇದೇ ಕಾರಣಕ್ಕೆ ಬಾಲಕಿಯನ್ನು ಕಾಲುವೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಎಸೆದಿದ್ದಾನೆ ಎಂಬುದಾಗಿ ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೇಶವ್ ಕುಮಾರ್ ಮಾರ್ಗದರ್ಶದಲ್ಲಿ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಬಾಲಕಿಯ ಮೃತದೇಹದ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:6 ವರ್ಷಗಳಿಂದ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ತಂದೆಯ ಬಂಧನ...