ಆಗ್ರಾ (ಉತ್ತರ ಪ್ರದೇಶ): ಬ್ರಹ್ಮಕುಮಾರಿ ಆಶ್ರಮದಲ್ಲಿ ಇಬ್ಬರು ಸಹೋದರಿಯರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಆತ್ಮಹತ್ಯೆಗೂ ಮುನ್ನ ಸಹೋದರಿಯರಿಬ್ಬರೂ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೂಸೈಡ್ ನೋಟ್ ರವಾನಿಸಿದ್ದಾರೆ. ಈ ಪ್ರಕರಣ ಸಂಬಂಧ ಈಗಾಗಲೇ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬ್ರಹ್ಮಕುಮಾರಿಯರಾದ ಏಕ್ತಾ ಮತ್ತು ಶಿಖಾ ಎಂಬುವವರೇ ಆತ್ಮಹತ್ಯೆಗೆ ಶರಣಾದ ಸಹೋದರಿಯರಾಗಿದ್ದಾರೆ. ತಮ್ಮ ಸಾವಿಗೆ ತಾರಾಚಂದ್, ಗುಡ್ಡನ್, ನೀರಜ್ ಸಿಂಘಾಲ್ ಹಾಗೂ ಗ್ವಾಲಿಯರ್ ಆಶ್ರಮದ ಪೂನಂ ಎಂಬುವರು ಕಾರಣ ಎಂದು ಸೂಸೈಡ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಆದ್ದರಿಂದ ಪೊಲೀಸ್ ತಂಡಗಳು ಈಗಾಗಲೇ ಗ್ವಾಲಿಯರ್ ಮತ್ತು ಮೌಂಟ್ ಅಬುನಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ನೀರಜ್ ಸಿಂಘಾಲ್‌ಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಏಕ್ತಾ ಮತ್ತು ಶಿಖಾ ಇಬ್ಬರೂ ಒಡಹುಟ್ಟಿದವರಾಗಿದ್ದು, ಬ್ರಹ್ಮಕುಮಾರಿ ಆಶ್ರಮದೊಂದಿಗೆ ಹಲವು ವರ್ಷಗಳಿಂದ ಸಂಬಂಧ ಹೊಂದಿದ್ದರು. ಎಂಟು ವರ್ಷಗಳ ಹಿಂದೆ ಅವರು ಮೌಂಟ್ ಅಬುದಲ್ಲಿ ದೀಕ್ಷೆ ಪಡೆದಿದ್ದರು. ನಾಲ್ಕು ವರ್ಷಗಳ ಹಿಂದೆ ಆಗ್ರಾ ಜಿಲ್ಲೆಯ ಜಗ್ನೇರ್‌ನ ಬಸಾಯಿ ರಸ್ತೆಯಲ್ಲಿ ಬ್ರಹ್ಮಕುಮಾರಿ ಆಶ್ರಮ ಸ್ಥಾಪನೆಯಾದ ನಂತರ ಇಬ್ಬರೂ ಅಲ್ಲಿ ವಾಸಿಸಲು ಪ್ರಾರಂಭಿಸಿದ್ದರು.
ಶುಕ್ರವಾರ ರಾತ್ರಿ 11.18ರ ಸುಮಾರಿಗೆ ಸಹೋದರಿಯೊಬ್ಬರು ತಮ್ಮ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೂಸೈಡ್ ನೋಟ್ ರವಾನಿಸಿದ್ದಾರೆ. ಈ ಗ್ರೂಪ್‌ನಲ್ಲಿ ಸಂದೇಶ ನೋಡಿದ ಕುಟುಂಬ ಸದಸ್ಯರು ತಕ್ಷಣವೇ ಆಶ್ರಮಕ್ಕೆ ದೌಡಾಯಿಸಿದ್ದಾರೆ. ಅಷ್ಟರಲ್ಲೇ ಕೋಣೆಯಲ್ಲಿ ಇಬ್ಬರು ಸಹೋದರಿಯರ ಶವಗಳು ಪತ್ತೆಯಾಗಿವೆ. ಜೊತೆಗೆ ಎರಡು ಡೆತ್ನೋಟ್ಗಳು ಸಹ ಪತ್ತೆಯಾಗಿವೆ. ಈ ಸುದ್ದಿ ತಿಳಿಯುತ್ತಿದ್ದಂತೆ ಡಿಸಿಪಿ ಸೋನಮ್ ಕುಮಾರ್, ಎಸಿಪಿ ಮಹೇಶ್ ಕುಮಾರ್, ಪೊಲೀಸ್ ಠಾಣೆ ಪ್ರಭಾರಿ ಜಾಗನರ್ ಕೂಡ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಒಬ್ಬ ಸಹೋದರಿ ಒಂದು ಪುಟದ ಸೂಸೈಡ್ ನೋಟ್ ಬರೆದಿದ್ದರೆ, ಮತ್ತೊಬ್ಬ ಸಹೋದರಿ ಮೂರು ಪುಟಗಳ ಸೂಸೈಡ್ ನೋಟ್ ಬರೆದಿದ್ದಾರೆ. ಅವ್ಯವಹಾರ, ಅನೈತಿಕ ಚಟುವಟಿಕೆಗಳು ಹಾಗೂ ಸುಮಾರು 25 ಲಕ್ಷ ರೂ.ಗಳ ವಂಚನೆ ಬಗ್ಗೆ ಉಲ್ಲೇಖಿಸಲಾಗಿದೆ. ಆಸಾರಾಮ್ ಬಾಪು ಅವರಂತೆ ಆರೋಪಿಗಳಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಈ ಡೆತ್ನೋಟ್ಗಳನ್ನು ಸಿಎಂ ಯೋಗಿ ಆದಿತ್ಯನಾಥ ಅವರ ಹೆಸರಿಗೆ ಬರೆಯಲಾಗಿದೆ.
ಎರಡು ದಿನಗಳ ಹಿಂದೆ ಇಬ್ಬರು ಸಹೋದರಿಯರನ್ನು ಭೇಟಿಯಾಗಲು ಆಶ್ರಮಕ್ಕೆ ಹೋಗಿದ್ದೆ. ಆಗ ಎಲ್ಲವೂ ಸಾಮಾನ್ಯ ಇತ್ತು ಎಂದು ಸಹೋದರ ಪೊಲೀಸರಿಗೆ ತಿಳಿಸಿದ್ದಾರೆ. ಈ ಬಗ್ಗೆ ಎಸಿಪಿ ಮಹೇಶ್ ಕುಮಾರ್ ಪ್ರತಿಕ್ರಿಯಿಸಿ, ಬ್ರಹ್ಮಕುಮಾರಿ ಆಶ್ರಮದಲ್ಲಿ ಸಹೋದರಿಯರು ಆತ್ಮಹತ್ಯೆ ಕುರಿತು ತನಿಖೆ ಆರಂಭಿಸಲಾಗಿದೆ. ಸಾವಿಗೆ ಮುನ್ನೂ ಮೂವರು ಹಾಗೂ ಮಹಿಳೆಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸಾವಿನ ನಿಜವಾದ ಕಾರಣ ಪತ್ತೆ ಹಚ್ಚಲು ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ:ವಾರಾಣಸಿಯಲ್ಲಿ ಹಿಂದೂ ಸಂಪ್ರದಾಯದಂತೆ ನಡೆದ ಫ್ರೆಂಚ್ ಪ್ರಜೆಯ ಅಂತ್ಯಕ್ರಿಯೆ: ಈಡೇರಿದ ವಿದೇಶಿಗನ ಆಸೆ