ಕಾನ್ಪುರ (ಉತ್ತರ ಪ್ರದೇಶ): ಶಿಕ್ಷಕಿಯೊಬ್ಬರು ವಿದ್ಯಾರ್ಥಿಗೆ ಅಶ್ಲೀಲ ಸಂದೇಶ ಕಳುಹಿಸುವ ಮೂಲಕ ತನ್ನೊಂದಿಗೆ ದೈಹಿಕ ಸಂಬಂಧಕ್ಕೆ ಬಲವಂತ ಮಾಡಿರುವ ಆರೋಪ ಪ್ರಕರಣ ಉತ್ತರ ಪ್ರದೇಶದ ಕಾನ್ಪುರದಲ್ಲಿ ವರದಿಯಾಗಿದೆ. ಈ ಕುರಿತು ವಿದ್ಯಾರ್ಥಿಯ ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇಲ್ಲಿನ ಕ್ಯಾಂಟ್ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯೊಂದರ ಶಿಕ್ಷಕಿಯ ವಿರುದ್ಧ 10ನೇ ತರಗತಿ ವಿದ್ಯಾರ್ಥಿಯ ಕುಟುಂಬ ಈ ಗಂಭೀರ ಆರೋಪ ಮಾಡಿದೆ. ''ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕಿ ತಮ್ಮ ಮಗನನ್ನು ಪ್ರೀತಿಸುವಂತೆ ಮತ್ತು ಲೈಂಗಿಕ ಸಂಬಂಧ ಹೊಂದುವಂತೆ ಒತ್ತಡ ಹೇರುತ್ತಿದ್ದಾರೆ'' ಎಂದು ವಿದ್ಯಾರ್ಥಿಯ ತಂದೆ ದೂರು ನೀಡಿದ್ದಾರೆ. ಅಲ್ಲದೇ, ''ಆರೋಪಿ ಶಿಕ್ಷಕಿ ಅಶ್ಲೀಲ ಸಂದೇಶಗಳನ್ನು ರವಾನಿಸುತ್ತಿದ್ದಾರೆ. ಲೈಂಗಿಕ ಸಂಬಂಧದ ಜೊತೆಗೆ ವಿದ್ಯಾರ್ಥಿಯ ಮೇಲೆ ಮತಾಂತರಕ್ಕೆ ಒತ್ತಡ ಹೇರುತ್ತಿದ್ದಾರೆ'' ಎಂದೂ ದೂರಲಾಗಿದೆ.
''ಈ ವಿಚಾರದ ಕುರಿತು ಶಿಕ್ಷಕಿಯ ಬಳಿ ನೇರವಾಗಿ ಪ್ರಶ್ನಿಸಲಾಗಿದೆ. ಆಕೆ ಒಪ್ಪಿಕೊಂಡಿದ್ದಾರೆ. ನಂತರ ಈ ವಿಷಯವನ್ನು ಆಕೆಯ ಕುಟುಂಬದ ಗಮನಕ್ಕೆ ತರುವ ಪ್ರಯತ್ನವನ್ನೂ ಮಾಡಲಾಗಿದೆ. ಶಿಕ್ಷಕಿಯ ಪತಿ ಮತ್ತು ಆಕೆಯ ಸಹೋದರ ಕೂಡ ಇದೇ ಶಾಲೆಯಲ್ಲಿ ಕೆಲಸ ಮಾಡುತ್ತಾರೆ. ಹೀಗಾಗಿ ನಮ್ಮ ಕುಟುಂಬಕ್ಕೆ ಹಾನಿ ಮಾಡುವ ಆತಂಕ ಎದುರಾಗಿದೆ. ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು'' ಎಂದು ವಿದ್ಯಾರ್ಥಿಯ ತಂದೆ ತಮ್ಮ ದೂರಿನಲ್ಲಿ ಕೋರಿದ್ದಾರೆ.