ಹಾಪುರ್( ಉತ್ತರ ಪ್ರದೇಶ):ಜಿಲ್ಲೆಯ ಬಹದ್ದೂರ್‌ಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ತಡರಾತ್ರಿ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿ ಕೊಂದು ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಬೈಕ್ ಡಿಕ್ಕಿಯ ವಿಚಾರವಾಗಿ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೈಕ್ ಡಿಕ್ಕಿಯಾದ ಬಳಿಕ ಎರಡು ಕಡೆಯವರ ನಡುವೆ ಮಾತಿನ ಚಕಮಕಿ ನಡೆದು ಕಲ್ಲು ತೂರಾಟ ನಡೆದಿದೆ. ಉದ್ವಿಗ್ನತೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಘಟನೆಯ ಹಿನ್ನೆಲೆ:ಮಂಗಳವಾರ ತಡರಾತ್ರಿ ಬಹದ್ದೂರ್‌ಗಢ ಪೊಲೀಸ್ ಠಾಣಾ ವ್ಯಾಪ್ತಿಯ ಲುಹಾರಿ ಗ್ರಾಮದಲ್ಲಿ ಇರ್ಷಾದ್ ಎಂಬ ಯುವಕನನ್ನು ಅವರದೇ ಗ್ರಾಮದ ಕೆಲವರು ಹೊಡೆದು ಕೊಂದಿದ್ದಾರೆ. ಬೈಕ್ ಡಿಕ್ಕಿ ವಿಚಾರವಾಗಿ ಗ್ರಾಮದಲ್ಲಿ ವಾಸವಾಗಿರುವ ಯುವಕರ ಜತೆ ಇರ್ಷಾದ್ ಜಗಳ ಮಾಡಿಕೊಂಡಿದ್ದ ಎನ್ನಲಾಗಿದೆ. ಆ ಬಳಿಕ ಆರೋಪಿಗಳು ಇರ್ಷಾದ್‌ಗೆ ಥಳಿಸಿದ್ದಾರೆ. ಗಾಯಗೊಂಡ ಸ್ಥಿತಿಯಲ್ಲಿದ್ದ ಇರ್ಷಾದ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇರ್ಷಾದ್ ಮೃತಪಟ್ಟಿದ್ದಾನೆ. ಇಷ್ಟೇ ಅಲ್ಲ, ವಿವಾದದ ವೇಳೆ ಎರಡೂ ಕಡೆಯವರ ನಡುವೆ ಕಲ್ಲು ತೂರಾಟ ಕೂಡಾ ನಡೆದಿದೆ. ಯುವಕನ ಹತ್ಯೆಯ ನಂತರ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ, ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಭಾರಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.