ಮೈನ್‌ಪುರಿ, ಉತ್ತರಪ್ರದೇಶ:ಜಿಲ್ಲೆಯಲ್ಲಿ ಭಯಾನಕರ ಘಟನೆಯೊಂದು ಬೆಳಕಿಗೆ ಬಂದಿದೆ. ಮನೆಯಲ್ಲಿ ಮಲಗಿದ್ದ ಐದು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇವರನ್ನೆಲ್ಲ ಹತ್ಯೆ ಮಾಡಿದ ಹಂತಕ ಕೊನೆಗೆ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಘಟನೆ ಕಿಷ್ನಿ ಪೊಲೀಸ್ ಠಾಣೆ ವ್ಯಾಪ್ತಿಯ ಗೋಕುಲಪುರ ಗ್ರಾಮದಲ್ಲಿ ನಡೆದಿದೆ. ಇನ್ನು ಕೊಲೆಯಾದ ಮನೆಯಲ್ಲಿ ಮೂರು ದಿನಗಳ ಹಿಂದೆ ಮದುವೆ ಸಮಾರಂಭ ನಡೆದಿತ್ತು ಎಂದು ತಿಳಿದುಬಂದಿದೆ.
ಮಲಗಿದ್ದ ಕುಟುಂಬಸ್ಥರನ್ನು ಕೊಚ್ಚಿ ಹಾಕಿದ ದುರಳ: ಜಿಲ್ಲೆಯಲ್ಲಿ ಭೀಕರ ಕೊಲೆಗಳು ನಡೆದಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಬೆಳಗಿನ ಜಾವ 4.30 ರಿಂದ ಐದು ಗಂಟೆಯ ನಡುವೆ ಮಲಗಿದ್ದ ಐವರನ್ನು ಕುಟುಂಬಸ್ಥನೊಬ್ಬ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಇದಾದ ಬಳಿಕ ತಾನೂ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಶಿವವೀರ್ ಯಾದವ್ ಎಂದು ಗುರುತಿಸಲಾಗಿದೆ. ಕೊಲೆಯಾದವರು ನವದಂಪತಿಯಾದ ಸೋನು ಯಾದವ್ (21) ಮತ್ತು ಸೋನಿ (20), ಸಹೋದರನಾದ ಭುಲ್ಲನ್ ಯಾದವ್ (25) ಮತ್ತು ಸೋದರ ಮಾವ ಸೌರಭ್ (23) ಹಾಗು ಸ್ನೇಹಿತನಾದ ದೀಪಕ್ (20) ಎಂದು ತಿಳಿದು ಬಂದಿದೆ. ಈ ಭಯಾನಕ ಘಟನೆ ಕಿಷ್ನಿ ಪೊಲೀಸ್ ಠಾಣೆ ವ್ಯಾಪ್ತಿಯ ಗೋಕುಲಪುರ ಅರ್ಸರಾ ಗ್ರಾಮದಲ್ಲಿ ನಡೆದಿದೆ.
ನಡೆದಿದ್ದೇನು?: ಗೋಕುಲಪುರ ಅರ್ಸರ ನಿವಾಸಿ ಸುಭಾಷ್ ಯಾದವ್ ಮಗನಾದ ಶಿವವೀರ್ ಯಾದವ್ ಅವರ ಸಹೋದರ ಸೋನು ಯಾದವ್ ಅವರ ಮದುವೆ ಎರಡ್ಮೂರು ದಿನಗಳ ಹಿಂದೆ ಇಟವಾದಲ್ಲಿ ಅದ್ಧೂರಿಯಾಗಿ ನಡೆದಿತ್ತು. ಇಡೀ ಕುಟುಂಬ ನವದಂಪತಿಯೊಂದಿಗೆ ಶುಕ್ರವಾರದಂದು ಇಟವಾದಿಂದ ಆರ್ಸರ ಗ್ರಾಮಕ್ಕೆ ಮರಳಿತ್ತು. ಇದಾದ ಬಳಿಕ ಕುಟುಂಬಸ್ಥರು ಎಲ್ಲರೂ ಮನೆಯಲ್ಲಿ ಊಟ ಮಾಡಿ ಮಲಗಿದ್ದರು.
ಆದರೆ ಏನಾಯ್ತೋ ಏನೋ ತಿಳಿಯಲಿಲ್ಲ. ಇಂದು ಬೆಳಗಿನ ಜಾವ ಶಿವವೀರ್ ಯಾದವ್ ಏಕಾಏಕಿ ತನ್ನ ಸಹೋದರ, ನವದಂಪತಿ, ಸೋದರ ಮಾವ, ಸ್ನೇಹಿತ ಸೇರಿದಂತೆ ಮಲಗಿದ್ದ ಇನ್ನಿತರರ ಮೇಲೆ ಕೊಡಲಿಯಿಂದ ದಾಳಿ ನಡೆಸಿದ್ದಾನೆ. ದಾಳಿ ಬಳಿಕ ತಾನೂ ಸಹ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ. ಈ ಘಟನೆಯಲ್ಲಿ ಶಿವವೀರ್ ಪತ್ನಿ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.