ಬರೆಲಿ( ಉತ್ತರಪ್ರದೇಶ:ಇಲ್ಲಿನ ಬರೇಲಿ ಜಿಲ್ಲೆಯ ಭೋಲಾಪುರ ರಾಮನಾಥ್ ಎಂಬ ಗ್ರಾಮದಲ್ಲಿ ಖಾಸಗಿ ಜೈವಿಕ ಅನಿಲ ಘಟಕದಲ್ಲಿ ಅನಿಲ ಸೋರಿಕೆಯಾಗಿ ಒಬ್ಬ ಮೃತಟ್ಟಿದ್ದು, ನಾಲ್ವರು ಅಸ್ವಸ್ಥರಾಗಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಬಿಹಾರ್ ಮೂಲದ ರಿಶಿ ಎಂಬ ಕಾರ್ಮಿಕ ಮೃತಪಟ್ಟಿದ್ದಾರೆ. ಸಹೋದ್ಯೋಗಿಗಳಾದ ಪ್ರಿನ್ಸ್, ಆಸಿಫ್, ಇರ್ಷಾದ್ ಮತ್ತು ಶಶಿಕಾಂತ್ ಅಸ್ವಸ್ಥರಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದರಲ್ಲಿ ಪ್ರಿನ್ಸ್ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ವಿವರ:ಬಿತ್ರಿ ಚೈನ್‌ಪುರ್ ಪ್ರದೇಶದ ಭೋಲಾಪುರ ರಾಮನಾಥ ಗ್ರಾಮದಲ್ಲಿ ಖಾಸಗಿ ಜೈವಿಕ ಅನಿಲ ಘಟಕವೊಂದನ್ನು ಸ್ಥಾಪಿಸಲಾಗಿದೆ. ಮಂಗಳವಾರ ತಡರಾತ್ರಿ ಪ್ಲಾಂಟ್‌ನಿಂದ ಅನಿಲ ಸೋರಿಕೆಯಾಗಲಾರಂಭಿಸಿದ್ದು, ಪ್ಲಾಂಟ್‌ನಲ್ಲಿದ್ದ ನಿರ್ವಾಹಕರಾದ ರಿಶಿ ಮತ್ತು ಪ್ರಿನ್ಸ್ ಇಬ್ಬರೂ ಗ್ಯಾಸ್ ಸೋರಿಕೆಯನ್ನು ತಡೆಯಲು ಟ್ಯಾಂಕ್ ಬಳಿಗೆ ತೆರಳಿದ್ದಾರೆ. ಈ ವೇಳೆ, ರಿಶಿ ಮತ್ತು ಪ್ರಿನ್ಸ್ ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ಇದನ್ನು ಗಮನಿಸಿದ ಇತರ ಸಹೋದ್ಯೋಗಿಗಳು ಇಬ್ಬರನ್ನು ರಕ್ಷಣೆ ಮಾಡಲು ಬಂದ ವೇಳೆ ಗ್ಯಾಸ್ ಸೋರಿಕೆಯಿಂದ ಇನ್ನೂ ಮೂವರು ಪ್ರಜ್ಞಾಹೀನರಾಗಿದ್ದರು.
ಘಟನೆ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಭಾಟಿ ಮಾತನಾಡಿ, ಅನಿಲ ಸೋರಿಕೆಯಾಗಿ ಮೊದಲಿಗೆ ಐವರು ಪ್ರಜ್ಞಾಹೀನರಾಗಿದ್ದಾರೆ. ಕೂಡಲೇ ಅವರನ್ನು ಖಾಸಗಿ ವೈದ್ಯಕೀಯ ಕಾಲೇಜಿಗೆ ಸೇರಿಸಲಾಗಿತ್ತು. ಈ ವೇಳೆ ಓರ್ವ ಕಾರ್ಮಿಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದು, ಮತ್ತೋರ್ವನ ಸ್ಥಿತಿ ಚಿಂತಾಜನಕವಾಗಿದೆ. ಉಳಿದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಕುರಿತ ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಪೂರ್ಣ ಪ್ರಮಾಣದ ತನಿಖೆ ನಡೆಸಲು ಜಿಲ್ಲಾಧಿಕಾರಿ ರವೀಂದ್ರಕುಮಾರ್ ಸಮಿತಿ ರಚಿಸಿದ್ದು, ತನಿಖೆ ನಡೆಸಿ ವರದಿ ಸಲ್ಲಿಸಲಿದ್ದಾರೆ. ವರದಿ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬರೇಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.
ಅಮೋನಿಯಾ ಅನಿಲ ಸೋರಿಕೆ:ಬಿಹಾರದ ವೈಶಾಲಿ ಜಿಲ್ಲೆಯ ಹಾಜಿಪುರದಲ್ಲಿರುವ ಡೈರಿ ಕಾರ್ಖಾನೆಯಲ್ಲಿ ಇತ್ತೀಚೆಗೆ ಅಮೋನಿಯಾ ಅನಿಲ ಸೋರಿಕೆಯಾಗಿ ಓರ್ವ ಕಾರ್ಮಿಕ ಸಾವನ್ನಪ್ಪಿ, 100ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದರು. ಕಾರ್ಖಾನೆಯಿಂದ ಸೋರಿಕೆಯಾದ ಅಮೋನಿಯಾ ಅನಿಲವು ಸುತ್ತಮುತ್ತಲಿನ ಪ್ರದೇಶಗಳಿಗೆ ನಾಲ್ಕು ಕಿಲೋಮೀಟರ್ ವ್ಯಾಪ್ತಿಯವರೆಗೆ ಹರಡಿತ್ತು.
ಇದನ್ನೂ ಓದಿ:ಬಿಹಾರದ ಡೈರಿ ಕಾರ್ಖಾನೆಯಲ್ಲಿ ಅಮೋನಿಯಾ ಅನಿಲ ಸೋರಿಕೆ: ಓರ್ವ ಸಾವು, 100ಕ್ಕೂ ಅಧಿಕ ಮಂದಿ ಅಸ್ವಸ್ಥ