ಬಸ್ತಿ, ಉತ್ತರಪ್ರದೇಶ:ಹಣ ಯಾರಿಗೆ ತಾನೆ ಬೇಡ ಹೇಳಿ. ನಾವೇನೇ ಮಾಡಿದರೂ ಹಣ ಗಳಿಸುವುದೇ ಉದ್ದೇಶವಾಗಿರುತ್ತದೆ. ಹಾಗಂತ ಕೋಟಿಗಟ್ಟಲೆ ಹಣ ಧುತ್ತೆಂದು ಬಂದರೆ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಿಡ್ತಾರಾ?. ಅದರ ಮೂಲದ ಲೆಕ್ಕ ಕೇಳೇ ಕೇಳ್ತಾರೆ. ಉತ್ತರಪ್ರದೇಶದ ದಿನಗೂಲಿ ಕಾರ್ಮಿಕನಿಗೆ ಅದು ಹೇಗೋ 221 ಕೋಟಿ ರೂಪಾಯಿ ಹಣ ಖಾತೆಯಲ್ಲಿ ಜಮಾ ಆಗಿದೆ. ಇಷ್ಟೇ ತಡ ಐಟಿ ಇಲಾಖೆ, ದಿನಗೂಲಿ ವ್ಯಕ್ತಿಗೆ ನೋಟಿಸ್ ನೀಡಿದೆ.
ವಿಚಿತ್ರ ಅಂದರೆ, ಹಣ ಎಲ್ಲಿಂದ ಬಂತು ಮತ್ತು ಎಷ್ಟು ಹಣ ತನ್ನ ಖಾತೆಯಲ್ಲಿ ಜಮಾ ಆಗಿದೆ ಅಂತ ಸ್ವತಃ ದಿನಗೂಲಿ ಕಾರ್ಮಿಕನಿಗೇ ಗೊತ್ತಿಲ್ಲ. ಐಟಿ ನೋಟಿಸ್ ಕಂಡು ಬೆದರಿರುವ ಆತ ಕಚೇರಿ, ಬ್ಯಾಂಕ್ಗಳಿಗೆ ಅಲೆದಾಡುವಂತಾಗಿದೆ. ಜೊತೆಗೆ ಇದೆಲ್ಲಾ ಕಿರಿಕಿರಿ ಬೇಡ ಅಂತ ಆತನೇ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾನೆ. ಬ್ಯಾಂಕ್ ಅಧಿಕಾರಿಗಳು ಖಾತೆ ವಿವರ ಪರಿಶೀಲಿಸಿ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ನಿಗೂಢವಾಗಿ ಖಾತೆ ಸೇರಿದ ಕೋಟ್ಯಂತರ ಹಣ:ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಬಟಾನಿಯಾ ಪ್ರದೇಶದ ನಿವಾಸಿ ಶಿವಪ್ರಸಾದ್ ಕೋಟ್ಯಂತರ ರೂಪಾಯಿ ವ್ಯೂಹದಲ್ಲಿ ಸಿಲುಕಿಕೊಂಡವರು. ದೆಹಲಿಯಲ್ಲಿ ಮಾರ್ಬಲ್ ಕಲ್ಲುಕುಟಿಕ ಕೆಲಸ ಮಾಡುವ ಈತನ ಖಾತೆಗೆ ಕೆಲ ದಿನಗಳ ಹಿಂದೆ ದಿಢೀರ್ ಆಗಿ 221 ಕೋಟಿಗೂ ಅಧಿಕ ಹಣ ಬಂದು ಬಿದ್ದಿದೆ. ಕೂಲಿ ಕಾರ್ಮಿಕ ಶಿವಪ್ರಸಾದ್ಗೆ ಇದರ ಅರಿವಿರಲಿಲ್ಲ. ಕೋಟಿಗಟ್ಟಲೆ ಹಣ ವರ್ಗವಾದ ಬಗ್ಗೆ ಆದಾಯ ತೆರಿಗೆ ಇಲಾಖೆಯಿಂದ ನೋಂದಾಯಿತ ಅಂಚೆ ಮೂಲಕ ಈತನ ಮನೆಗೆ ನೋಟಿಸ್ ರವಾನಿಸಲಾಗಿದೆ.