ಫಿರೋಜಾಬಾದ್(ಉತ್ತರ ಪ್ರದೇಶ):ಕ್ಯಾಮರಾ, ಜಿಪಿಎಸ್ ಅಳವಡಿಸಿದಹೈಟೆಕ್ ಟ್ರಕ್ ಮೂಲಕ ಚಂಡೀಗಢದಿಂದ ಬಿಹಾರಕ್ಕೆ ಸಾಗಿಸಲಾಗುತ್ತಿದ್ದ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಮದ್ಯವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಮಿನಿ ಟ್ರಕ್‌ವೊಂದರಲ್ಲಿನ ಸುಮಾರು 295 ಮದ್ಯದ ಬಾಕ್ಸ್ಗಳನ್ನು ಸಾಗಿಸಲಾಗುತ್ತಿತ್ತು. ಈ ಸಂಬಂಧ ಟ್ರಕ್ ಚಾಲಕ ಹರಿಯಾಣ ನಿವಾಸಿ ಮುಖೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಔರಂಗಾಬಾದ್, ಪಾಟ್ನಾ ಮೂಲಕ ದರ್ಭಾಂಗಕ್ಕೆ ಅಕ್ರಮ ಮದ್ಯ ರವಾನೆಯಾಗುತ್ತಿತ್ತು ಎಂದು ತಿಳಿದು ಬಂದಿದೆ. ಖಚಿತ ಮಾಹಿತಿ ಮೇರೆಗೆ ಮಾರ್ಗಮಧ್ಯೆ ವಾಹನ ತಡೆದ ಪೊಲೀಸರು ವಾಹನ ಸಮೇತ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಟ್ರಕ್ ಚಾಲಕನನ್ನು ಬಂಧಿಸಿರುವ ಪೊಲೀಸರು ಟ್ರಕ್ ಮಾಲೀಕರು ಮತ್ತು ಇತರ ಹಲವು ಪ್ರಮುಖ ವಿವರಗಳಿಗಾಗಿ ತನಿಖೆ ಮುಂದುವರೆಸಿದ್ದಾರೆ.
ಚಾಲಕನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಟ್ರಕ್‌ನ ಹಿಂಬಾಗಿಲನ್ನು ಪಾಸ್‌ವರ್ಡ್ ಬಳಸಿ ತೆರೆಯಲಾಗಿದೆ. ಅಲ್ಲದೇ ಟ್ರಕ್‌ನಲ್ಲಿ ಕ್ಯಾಮರಾ ಮತ್ತು ಜಿಪಿಎಸ್ ಅಳವಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪಂಜಾಬ್ ಮತ್ತು ಚಂಡೀಗಢದ ಮದ್ಯವನ್ನು ಬಿಹಾರಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಹಿಂದಿನಿಂದಲೂ ದೂರುಗಳು ಬರುತ್ತಿವೆ ಎಂದು ಎಸ್ಪಿ ದೇಹತ್ ಕುನ್ವರ್ ರಣವಿಜಯ್ ಸಿಂಗ್ ಹೇಳಿದ್ದಾರೆ.
ಗುರುವಾರ ಖಚಿತ ಮಾಹಿತಿ ಮೇರೆಗೆ ಶಿಕೋಹಾಬಾದ್ ಪೊಲೀಸ್ ಠಾಣೆಗೆ ಸಂದೇಶ ನೀಡಲಾಯಿತು. ಕಾರ್ಯ ಪ್ರವೃತ್ತರಾದ ಪೊಲೀಸರು ರಾಷ್ಟ್ರೀಯ ಹೆದ್ದಾರಿಯ ನೌಶೇರಾ ಬಳಿ ಮಿನಿ ಟ್ರಕ್ ಅನ್ನು ತಡೆದು ನಿಲ್ಲಿಸಿದರು. ಈ ವೇಳೆ, ವಾಹನ ಪರಿಶೀಲಿಸಿದಾಗ ಲಾರಿಯ ಹಿಂಬಾಗಿಲನ್ನು ಪಾಸ್‌ವರ್ಡ್ ಹಾಕಿ ಲಾಕ್ ಮಾಡಲಾಗಿತ್ತು. ಬಹಳ ಪರಿಶ್ರಮದ ನಂತರ ಟ್ರಕ್ ಬಾಗಿಲು ತೆರೆದಾಗ ಅದರಲ್ಲಿ 295 ಅಕ್ರಮ ಮದ್ಯದ ಬಾಕ್ಸ್ಗಳು ಪತ್ತೆಯಾಗಿವೆ. ಇದರ ಬೆಲೆ ಸುಮಾರು 20 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಮಿನಿ ಟ್ರಕ್‌ಗೆ ಕ್ಯಾಮರಾ ಮತ್ತು ಜಿಪಿಎಸ್ ವ್ಯವಸ್ಥೆಯನ್ನು ಸಹ ಅಳವಡಿಸಲಾಗಿದೆ. ಮದ್ಯ ಸಾಗಾಣಿಕೆದಾರರ ಸಂಪೂರ್ಣ ದಂಧೆ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಮದ್ಯವನ್ನು ಎಲ್ಲಿಂದ ತರಲಾಗಿದೆ?, ಯಾರಿಗೆ ಸರಬರಾಜು ಮಾಡಲಾಗಿದೆ. ಈ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ದೇಹತ್ ತಿಳಿಸಿದ್ದಾರೆ.
ಯುಪಿಯಲ್ಲಿ ಹೆಚ್ಚಾದ ಫಾರಿನ್ ಬ್ರ್ಯಾಂಡ್ ಮದ್ಯದ ಘಮಲು:ಉತ್ತರ ಪ್ರದೇಶದಲ್ಲಿ ವಿದೇಶಿ ಬ್ರ್ಯಾಂಡಿನ (ಫಾರಿನ್ ಬ್ರ್ಯಾಂಡ್) ಮದ್ಯದ ಘಮಲು ಹೆಚ್ಚಾಗುತ್ತಿದೆ. ದಿನಗಳೆದಂತೆ ಹೊಸ ಹೊಸ ವಿದೇಶಿ ಮದ್ಯ ಕಂಪನಿಗಳು ರಾಜ್ಯದಲ್ಲಿ ತಮ್ಮ ಮದ್ಯ ಮಾರಾಟಕ್ಕೆ ಲೈಸೆನ್ಸ್ ಪಡೆಯುತ್ತಿದ್ದು, ಜನರಿಗೂ ಫಾರಿನ್ ಬ್ರ್ಯಾಂಡ್ ತುಂಬಾ ಇಷ್ಟವಾಗತೊಡಗಿವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯದಲ್ಲಿ ನೋಂದಣಿಯಾದ ಒಟ್ಟು ಮದ್ಯ ಬ್ರಾಂಡ್ ಗಳ ಸಂಖ್ಯೆ 3,854 ಕ್ಕೆ ಏರಿದೆ. ಇದು ಇಲ್ಲಿಯವರೆಗೆ ನೋಂದಣಿಯಾದ ಅತಿ ಹೆಚ್ಚಿನ ಸಂಖ್ಯೆಯಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ ರಾಜ್ಯದಲ್ಲಿ ನೋಂದಾಯಿಸಲ್ಪಟ್ಟ 3,106 ವಿವಿಧ ಆಲ್ಕೋಹಾಲ್ ಬ್ರ್ಯಾಂಡ್ಗಳಿದ್ದವು.
ಇದನ್ನೂ ಓದಿ:ಯುಪಿಯಲ್ಲಿ ಹೆಚ್ಚಾದ ಫಾರಿನ್ ಬ್ರ್ಯಾಂಡ್ ಮದ್ಯದ ಘಮಲು: 573 ವಿದೇಶಿ ಬ್ರ್ಯಾಂಡ್ ನೋಂದಣಿ