ಲಖನೌ (ಉತ್ತರ ಪ್ರದೇಶ): ಯುವತಿ ಪ್ರೀತಿಗೆ ಸಮ್ಮತಿ ನೀಡಿಲ್ಲ ಎಂಬ ಕಾರಣಕ್ಕೆ ಪಾಗಲ್ ಪ್ರೇಮಿಗಳು ಆ್ಯಸಿಡ್ ಎರಚಿದ್ದು, ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವುದು, ಅತ್ಯಾಚಾರ ಎಸಗಿರುವ ಘಟನೆಗಳು ನಡೆದಿವೆ. ಆದರೆ ಉತ್ತರ ಪ್ರದೇಶದಲ್ಲಿ ಪದವಿ ಓದುವ ಯುವತಿಯೊಬ್ಬಳು ಪ್ರಿಯಕರ ತನಗೆ ವಂಚಿಸುತ್ತಿದ್ದಾನೆ ಎಂದು ತಿಳಿದು ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಯುವತಿ ರಸ್ತೆಯ ಮಧ್ಯೆಯೇ ಯುವಕನಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದಾಳೆ. ಆತ ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದ್ದು, ಆತನ ಬೆನ್ನು ಹತ್ತಿ ಹೋಗಿ ಹಲ್ಲೆ ಮಾಡಿದ್ದಾಳೆ. ಕೊನೆಗೆ ಸ್ಥಳೀಯರು ಆಕೆಯನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದು, ಹಲ್ಲೆಗೊಳಗಾದ ಯುವಕ ಚಿಕಿತ್ಸೆ ಪಡೆಯುತ್ತಿದ್ದಾನೆ. ಯುವತಿ ಪೊಲೀಸ್ ವಶದಲ್ಲಿದ್ದಾಳೆ. ಘಟನೆ ಮಡೆಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ದಲಿಗಂಜ್ ಠಾಣೆಯ ಬಳಿ ನಡೆದಿದೆ.
ದಲಿಗಂಜ್ ಠಾಣೆಯ ಬಳಿಗೆ ಬರುವಂತೆ ಯುವತಿ ಹೇಳಿದ್ದಳು ಎಂದು ಯುವಕ ಬಂದಿದ್ದ. ಅಲ್ಲಿಗೆ ಬಂದ ಪ್ರೇಯಸಿ ನೀನು ನನ್ನನ್ನು ಪ್ರೀತಿಸುತ್ತಿಯಾ ಎಂದು ಕೇಳಿದ್ದಾಳೆ. ಅದಕ್ಕೆ ಅವನು ಹೌದು, ತುಂಬಾ ಪ್ರೀತಿಸುತ್ತಿರುವುದಾಗಿ ಹೇಳಿದ್ದಾನೆ. ಆದರೆ ಈ ವೇಳೆ ಗೆಳತಿ ಹರಿತವಾದ ಚಾಕುವಿನಿಂದ ಬಲವಾಗಿ ಹಲ್ಲೆ ನಡೆಸಿದ್ದಾಳೆ. ಅಷ್ಟರಲ್ಲಿ ಅಲ್ಲಿಂದ ಓಡಿ ಹೋಗಲು ಆರಂಭಿಸಿದ ಪ್ರೇಮಿ, ಓಡುತ್ತಲೇ ಸೀತಾಪುರ ರಸ್ತೆ ಡಾಲಿಗಂಜ್ ಕ್ರಾಸಿಂಗ್ ಮೂಲಕ ಸಿಯಾ ಕಾಲೇಜು ಬಳಿ ತಲುಪಿದ್ದಾನೆ. ಇದೇ ವೇಳೆ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು (ಶನಿವಾರ) ಮಧ್ಯಾಹ್ನ 12:00 ರ ಸುಮಾರಿಗೆ ಸೀತಾಪುರ ರಸ್ತೆಯಲ್ಲಿ ಗೆಳತಿ ತನ್ನ ಪ್ರಿಯಕರನನ್ನು ಕೊಲ್ಲುವ ಉದ್ದೇಶದಿಂದ ಚಾಕುವಿನಿಂದ ಹಲ್ಲೆ ನಡೆಸಿದ್ದಾಳೆ. ಆಕೆ ಬಿಕಾ ಮೌ ನಿವಾಸಿಯಾಗಿದ್ದು, ಲಕ್ನೋದ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎ ಪದವಿ ಪಡೆಯುತ್ತಿರುವ ವಿದ್ಯಾರ್ಥಿನಿ ಆಗಿದ್ದಾಳೆ. ಬಕ್ಷಿ ತಲಾಬ್‌ನಲ್ಲಿ ವಾಸಿಸುತ್ತಿದ್ದ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ಎಪ್ರಿಲ್ ತಿಂಗಳಿನಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಕೆಲವು ದಿನಗಳ ನಂತರ ಪ್ರೇಮಿ ಗೆಳತಿಯನ್ನು ಅನುಮಾನಿಸಲು ಪ್ರಾರಂಭಿಸಿದನು. ಇದಾದ ನಂತರ ಇಬ್ಬರ ನಡುವೆ ಅಂತರ ಹೆಚ್ಚಾಗತೊಡಗಿತು.
ಯುವಕ ಹೇಳುವ ಪ್ರಕಾರ, ಅವನು ಒಂದು ವರ್ಷ ತನ್ನ ಅಧ್ಯಯನದ ಸಮಯದಲ್ಲಿ ಆಕೆಯನ್ನು ಪ್ರೀತಿಸುತ್ತಿದ್ದನು. ಇದು ಮನೆಯಲ್ಲಿ ತಿಳಿದಿದ್ದರಿಂದ ನಮ್ಮಿಬ್ಬರ ನಡುವೆ ಅಂತರ ಹೆಚ್ಚಾಗತೊಡಗಿತು. ಇಂದು ಆಕೆಯೇ ಕರೆ ಮಾಡಿ ದಲಿಗಂಜ್‌ಗೆ ಬರುವಂತೆ ಕರೆದಿದ್ದಾಳೆ. ಆ ಸಮಯದಲ್ಲಿ ಅತ್ತಿಗೆಯ ಅಣ್ಣನೂ ಜೊತೆಗಿದ್ದರು. ನಾನು ಅಲ್ಲಿಗೆ ತಲುಪಿದಾಗ, ಆಕೆ ನೀನು ನನ್ನನ್ನು ತುಂಬಾ ಪ್ರೀತಿಸುತ್ತೀಯಾ ಎಂದು ಕೇಳಿದಳು. ನಾನು ಹೌದು ಎಂದು ಹೇಳಿದೆ. ಅಷ್ಟರಲ್ಲಿ ಅವಳು ಹರಿತವಾದ ಚಾಕುವನ್ನು ತೆಗೆದುಕೊಂಡು ನನ್ನ ಕೈಗೆ ಹಲ್ಲೆ ಮಾಡಿದಳು. ಅಷ್ಟರಲ್ಲಿ ಅಲ್ಲಿಂದ ಹೇಗೋ ಓಡಿ ಸೀತಾಪುರ ರಸ್ತೆ ಸಿಯಾ ಕಾಲೇಜು ಬಳಿ ತಲುಪಿದೆ ಎಂದು ಘಟನೆ ಬಗ್ಗೆ ಹೇಳಿದ್ದಾನೆ.
ಆದರೆ ಯುವತಿ ಆತನ ಮೇಲೆ ಹಲ್ಲೆ ಮಾಡಲು ಉದ್ದೇಶ ಏನು ಎಂದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆತ ವಂಚಿಸುತ್ತಾನೆ ಎಂಬ ಅನುಮಾನದಿಂದ ಈ ರೀತಿ ಮಾಡಿದ್ದಾಳೆ ಎಂದು ಹೇಳಲಾಗಿದೆ.
ಇದನ್ನೂ ಓದಿ:Bengaluru crime: ಸಂಗಾತಿ ಮೇಲಿನ ಕೋಪಕ್ಕೆ ಮಗುವನ್ನು ಅಪಹರಿಸಿದ ತಂದೆಯ ಬಂಧನ