ಬದೌನ್ (ಉತ್ತರಪ್ರದೇಶ) :ವರದಕ್ಷಿಣೆ ಪಡೆಯುವುದು ಕಾನೂನುರೀತ್ಯಾ ಅಪರಾಧವಾಗಿದ್ದರೂ ಅದಕ್ಕೆ ಇನ್ನೂ ಕಡಿವಾಣ ಇಲ್ಲವಾಗಿದೆ. ಹೀಗಾಗಿ ಅದೆಷ್ಟೋ ಜೀವಗಳು ದುರಂತ ಅಂತ್ಯ ಕಾಣುತ್ತಿವೆ. ಉತ್ತರಪ್ರದೇಶದಲ್ಲೂ ಇಂಥದ್ದೇ ಘಟನೆ ಬೆಳಕಿಗೆ ಬಂದಿದೆ. ಸರ್ಕಾರಿ ಉದ್ಯೋಗಿಯಾಗಿದ್ದ ವರ ಮದುವೆಗೆ 30 ಲಕ್ಷ ರೂಪಾಯಿ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದ. ಇದನ್ನು ಪೂರೈಸಲು ಶಕ್ತವಾಗದ ಕಾರಣ ಯುವತಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಘಟನೆಯ ವಿವರ :ಯುವಕ ಆದಾಯ ತೆರಿಗೆ ಕಚೇರಿಯಲ್ಲಿ ಗುಮಾಸ್ತನಾಗಿದ್ದ. ಈತನಿಗೆ ಕರಿಯಮಾಯಿ ಎಂಬ ಗ್ರಾಮದ ಯುವತಿ ಜೊತೆಗೆ ವಿವಾಹ ನಿಶ್ಚಯಿಸಲಾಗಿತ್ತು. ಏಪ್ರಿಲ್ 20 ರಂದು ವಿವಾಹ ಮುಹೂರ್ತ ನಿಗದಿ ಮಾಡಲಾಗಿತ್ತು. ಆದರೆ, ವರದಕ್ಷಿಣೆ ಆಸೆಗಾಗಿ ಯುವಕ 30 ಲಕ್ಷ ಹಣ ಮತ್ತು ಕಾರು ಗಿಫ್ಟ್ ನೀಡಲು ಯುವತಿ ಕುಟುಂಬದ ಎದುರು ಬೇಡಿಕೆ ಇಟ್ಟಿದ್ದಾನೆ.
ಈ ಮೊದಲೇ ನಿರ್ಧರಿಸಿದಂತೆ 20 ಲಕ್ಷ ಹಣ ನೀಡಲು ಯುವತಿ ಕುಟುಂಬ ಮುಂದಾಗಿತ್ತು. ಆದರೆ, ಯುವಕನ ಹಣದ ದಾಹ ಹೆಚ್ಚಾಗಿತ್ತು. ವಿವಾಹಕ್ಕೆ 20 ದಿನ ಮುಂಚಿತವಾಗಿ ವರ ವರಾತ ತೆಗೆದಿದ್ದು, 30 ಲಕ್ಷ ರೂಪಾಯಿ ನೀಡಲು ಒತ್ತಾಯಿಸಿದ್ದಾನೆ. ಅದಾಗಲೇ ಯುವತಿ ಕಡೆಯವರು ಎಲ್ಲ ಬಂಧುಗಳಿಗೆ ಆಮಂತ್ರಣ ಪತ್ರಿಕೆ ವಿತರಿಸಿದ್ದರು. ಅಷ್ಟು ದೊಡ್ಡ ಪ್ರಮಾಣದಲ್ಲಿ ವರದಕ್ಷಿಣೆ ನೀಡಲು ಸಾಧ್ಯವಿಲ್ಲ ಎಂದು ಯುವತಿ ಕುಟುಂಬಸ್ಥರು ಹೇಳಿದಾಗ್ಯೂ ಯುವಕ ಇದಕ್ಕೆ ಒಪ್ಪದೇ ಮದುವೆ ಮುಂದೂಡುತ್ತಲೇ ಬಂದಿದ್ದ. ಇತ್ತ ಯುವತಿ ಕುಟುಂಬ ಮದುವೆ ದಿನಾಂಕ ಮುಗಿದಿದ್ದು, ಅವಮಾನಕ್ಕೀಡಾಗಿತ್ತು.
ವಿಡಿಯೋ ಮಾಡಿ ಯುವತಿ ಆತ್ಮಹತ್ಯೆ:ವಿವಾಹ ಮುಂದೂಡಿಕೆಯಿಂದ ಸಮಾಜದಲ್ಲಿ ಯುವತಿ ಮತ್ತು ಆಕೆಯ ಕುಟುಂಬ ಅವಮಾನಕ್ಕೀಡಾಗಿತ್ತು. ಇದರಿಂದ ತೀವ್ರ ನೊಂದಿದ್ದ ವಧು ಭಾನುವಾರ ರಾತ್ರಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.