ಇಟಾವ (ಉತ್ತರ ಪ್ರದೇಶ): ಇಬ್ಬರು ಪುಟ್ಟ ಸಹೋದರಿಯರನ್ನು ಕೊಲೆಗೈದ ಆರೋಪದಡಿ 18 ವರ್ಷದ ಯುವತಿಯನ್ನು ಉತ್ತರ ಪ್ರದೇಶದ ಇಟಾವ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಯುವತಿ ತನ್ನ ಪ್ರಿಯಕರನೊಂದಿಗೆ ಅಸಭ್ಯ ಸ್ಥಿತಿಯಲ್ಲಿದ್ದ ಸಂದರ್ಭವನ್ನು ಈ ಬಾಲಕಿಯರು ನೋಡಿದ್ದರು. ಇದರಿಂದಾಗಿಯೇ ತಂಗಿಯರನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಯುವತಿಯನ್ನು ಬಂಧಿಸಿ ಇತರ ಮೂವರು ಪುರುಷರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಇಲ್ಲಿನ ಬಲರಾಯ್ ಪೊಲೀಸ್ ಠಾಣಾ ವ್ಯಾಪ್ತಿಯ ಬಹುದ್ದೂರ್ಪುರ ಗ್ರಾಮದಲ್ಲಿ ಆರು ಹಾಗೂ ನಾಲ್ಕು ವರ್ಷದ ಬಾಲಕಿಯರ ಮೃತದೇಹಗಳು ಶಿರಚ್ಛೇದಗೊಂಡ ಸ್ಥಿತಿಯಲ್ಲಿ ಭಾನುವಾರ ರಾತ್ರಿ ಪತ್ತೆಯಾಗಿದ್ದವು. ಸಾವಿಗೀಡಾದ ಬಾಲಕಿಯರು ಜೈವೀರ್ ಸಿಂಗ್ ಎಂಬವರು ಪುತ್ರಿಯರು ಎಂದು ಗುರುತಿಸಲಾಗಿದೆ. ಇವರ ಕುಟುಂಬದಲ್ಲಿ ಜೈವೀರ್ ಸಿಂಗ್ ಮತ್ತು ಪತ್ನಿ ಹಾಗೂ 12 ವರ್ಷ, 8 ವರ್ಷದ ಪುತ್ರರು ಇದ್ದಾರೆ. ಆದರೆ, ಘಟನೆ ನಡೆದ ಸಂದರ್ಭದಲ್ಲಿ ಮನೆಯಲ್ಲಿ ಬಾಲಕಿಯರು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನಡೆದಿದ್ದೇನು?:ಅಂಜಲಿ ಪಾಲ್ ಎಂಬಾಕೆಯೇ ಬಂಧಿತ ಆರೋಪಿ. ಭಾನುವಾರ ಮನೆಯಲ್ಲಿ ತಂದೆ-ತಾಯಿ ಇರದ ಸಂದರ್ಭದಲ್ಲಿ ತನ್ನ ಪ್ರಿಯಕರನೊಂದಿಗೆ ಮನೆಯಲ್ಲಿ ಆತ್ಮೀಯ ಹಾಗೂ ಸಲುಗೆಯಿಂದ ಇದ್ದಳು. ಈ ದೃಶ್ಯಗಳನ್ನು ತನ್ನ ಇಬ್ಬರು ತಂಗಿಯರು ಗಮನಿಸಿದ್ದರು. ಹೀಗಾಗಿ ಈ ವಿಷಯವನ್ನು ಅವರು ಪೋಷಕರಿಗೆ ತಿಳಿಸುವ ಭಯದಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.