ಕಾನ್ಪುರ (ಉತ್ತರ ಪ್ರದೇಶ) : ಕೆಲವೊಮ್ಮೆ ಸಾಕು ಪ್ರಾಣಿಗಳು ಬೆಳೆ ಹಾನಿ ಮಾಡಿದಾಗ ರೈತ ಮತ್ತು ಪ್ರಾಣಿಗಳ ಮಾಲೀಕರ ನಡುವೆ ವಾಗ್ವಾದ ನಡೆಯುವುದು ಸಾಮಾನ್ಯ. ಇದೀಗ ಕಾನ್ಪುರದ ಸಾಧ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ರೈತನೊಬ್ಬ ಆಟೋದಲ್ಲಿ ಹಲವು ಮೇಕೆಗಳನ್ನು ತುಂಬಿಕೊಂಡು ಠಾಣೆ ಮೆಟ್ಟಿಲೇರಿದ್ದಾರೆ.
ಹೌದು, ಚೆಂಡು ಹೂವಿನ ಬೆಳೆಯನ್ನು ಮೇಕೆಗಳು ತಿಂದು ಹಾಳು ಮಾಡಿದ್ದು, ಇದರಿಂದ ಮನನೊಂದ ರೈತ ಶೈಲೇಂದ್ರ ನಿಶಾದ್ ಎಂಬುವರು ಆಟೋದಲ್ಲಿ ಹಲವು ಮೇಕೆಗಳನ್ನು ತುಂಬಿಕೊಂಡು ಬಂದು ನ್ಯಾಯ ದೊರಕಿಸಿಕೊಡುವಂತೆ ಪೊಲೀಸ್ ಸಿಬ್ಬಂದಿಗೆ ಮನವಿ ಮಾಡಿದ್ದಾರೆ. ಜೊತೆಗೆ, ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದರಿಂದಾಗಿ ಪೊಲೀಸರೇ ಅಚ್ಚರಿಗೊಂಡಿದ್ದು, ಬಳಿಕ ಮೇಕೆಗಳ ಮಾಲೀಕರನ್ನು ಹಿಡಿದು ಬುದ್ಧಿ ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಎಸ್‌ಎಸ್‌ಐ ಪ್ರಮೋದ್ ಕುಮಾರ್, ಭೀತರಗಾಂವ್‌ನ ಗೌರಿಕ್ಕರ ಗ್ರಾಮದಲ್ಲಿ ಘಟನೆ ನಡೆದಿದೆ. ಆಟೋದಲ್ಲಿ ಮೇಕೆಗಳನ್ನು ತುಂಬಿಕೊಂಡು ಠಾಣೆಗೆ ಆಗಮಿಸಿದ ರೈತರೊಬ್ಬರು ಅವುಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು. ಈ ಮೇಕೆಗಳು ಗದ್ದೆಯಲ್ಲಿ ಬೆಳೆದಿದ್ದ ಚೆಂಡು ಹೂವಿನ ಬೆಳೆ ಹಾನಿ ಮಾಡಿದ್ದು, ಬಹುತೇಕ ಗಿಡಗಳನ್ನು ತಿಂದು ಹಾಕಿವೆ ಎಂದು ಆರೋಪಿಸಿದರು. ಈ ಹಿನ್ನೆಲೆ ಪೊಲೀಸರು ಮೇಕೆಗಳ ಮಾಲೀಕನನ್ನು ಠಾಣೆಗೆ ಕರೆ ತಂದು ರೈತನ ಮುಂದೆ ಛೀಮಾರಿ ಹಾಕಿದಾಗ ರೈತನಿಗೂ ಸಮಾಧಾನವಾಯಿತು. ಬಳಿಕ ಮಾಲೀಕ ಮೇಕೆಗಳೊಂದಿಗೆ ಠಾಣೆಯಿಂದ ವಾಪಸಾದರು ಎಂದರು.