ಮೊರಾದಾಬಾದ್, ಉತ್ತರಪ್ರದೇಶ:ಜಿಲ್ಲೆಯಲ್ಲಿ ರಾಜಕೀಯ ಮುಖಂಡನ ಮೇಲೆ ಗುಂಡಿನ ದಾಳಿ ನಡೆದಿದೆ. ಬಿಜೆಪಿ ಮುಂಖಡರೊಬ್ಬರನ್ನು ನಡು ರಸ್ತೆಯಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ಹತ್ಯೆಯಾದ ಬಿಜೆಪಿ ಮುಖಂಡನನ್ನು ಅನುಜ್ ಚೌಧರಿ ಎಂದು ಗುರುತಿಸಲಾಗಿದೆ. ಇನ್ನು ಈ ಹತ್ಯೆಯ ದೃಶ್ಯಗಳು ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ನಡು ಬೀದಿಯಲ್ಲೇ ಬಿಜೆಪಿ ಮುಖಂಡನ ಕೊಲೆ: ಜಿಲ್ಲೆಯ ಪಾಕ್ಬಾಡಾದ ಪ್ರತಿಭಾ ಅಪಾರ್ಟ್‌ಮೆಂಟ್‌ನಲ್ಲಿ ಬಿಜೆಪಿ ಕಿಸಾನ್ ಮೋರ್ಚಾದ ನಾಯಕ ಅನುಜ್ ಚೌಧರಿ ವಾಸಿಸುತ್ತಿದ್ದರು. ಅವರು ಸಂಭಾಲ್‌ನ ನೆಕ್‌ಪುರ ನಿವಾಸಿಯಾಗಿದ್ದಾರೆ. ಗುರುವಾರ ತಮ್ಮ ಸಹೋದರನೊಂದಿಗೆ ಮನೆ ಸಮೀಪದ ಉದ್ಯಾನದಲ್ಲಿ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ, ಬೈಕ್‌ನಲ್ಲಿ ಹಿಂಬದಿನಿಂದ ಬಂದ ಮೂವರು ದುಷ್ಕರ್ಮಿಗಳು ಬಿಜೆಪಿ ನಾಯಕ ಅನುಜ್ ಚೌಧರಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡೇಟು ತಿಂದ ಚೌಧರಿ ದಿಢೀರನೇ ನೆಲಕ್ಕೆ ಕುಸಿದು ಬಿದ್ದರು. ಬೈಕ್ ಇಳಿದು ಬಂದ ದುಷ್ಕರ್ಮಿಗಳಿಬ್ಬರು ಚೌಧರಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಇನ್ನು ಗುಂಡು ಸದ್ದು ಮೊಳಗುತ್ತಿದ್ದಂತೆ ಚೌಧರಿ ಸಹೋದರ ಹೆದರಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಗುಂಡಿನ ದಾಳಿ ನಡೆಸಿದ ಬಳಿಕ ಆರೋಪಿಗಳು ತಮ್ಮ ಬೈಕ್ ಮೂಲಕ ಪರಾರಿಯಾಗಿದ್ದಾರೆ. ಆರೋಪಿಗಳು ಪರಾರಿ ಬಳಿಕ ಗಾಯಾಳು ಅನುಜ್ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಅಪಾರ್ಟ್‌ಮೆಂಟ್‌ನ ಮೊದಲ ಗೇಟ್‌ನಿಂದ ಎರಡನೇ ಗೇಟ್‌ವರೆಗೆ ಸೆಕ್ಯುರಿಟಿ ಗಾರ್ಡ್‌ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಸೆಕ್ಯುರಿಟಿ ಗಾರ್ಡ್ಗಳ ಕಣ್ಣುಗಳನ್ನು ತಪ್ಪಿಸಿ ದಾಳಿಕೋರರು ಹೇಗೆ ಒಳಗೆ ನುಗ್ಗಿದರು ಮತ್ತು ದಾಳಿಕೋರರು ಗುಂಡು ಹಾರಿಸಿ ಪರಾರಿಯಾಗುತ್ತಿದ್ದ ವೇಳೆ ಯಾರೂ ಅವರನ್ನು ತಡೆಯಲು ಪ್ರಯತ್ನಿಸಲಿಲ್ಲ ಎಂಬುದೇ ಈಗ ಚರ್ಚಾ ವಿಷಯವಾಗಿದೆ.