ಫರೂಕಾಬಾದ್ (ಉತ್ತರ ಪ್ರದೇಶದ):ಉತ್ತರ ಪ್ರದೇಶದ ಫರೂಕಾಬಾದ್‌ನಿಂದ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಕೊತ್ವಾಲಿ ಮೊಹಮ್ಮದಾಬಾದ್ ಪ್ರದೇಶದಲ್ಲಿ, ಇಬ್ಬರು ಸೋದರಿಯರು ಪರಸ್ಪರ ಮದುವೆಯಾಗಲು ಪಟ್ಟು ಹಿಡಿದಿದ್ದಾರೆ. ಆದರೆ, ಇವರಿಬ್ಬರ ಸಲಿಂಗ ಸಂಬಂಧಕ್ಕೆ ಪೋಷಕರು ತೀವ್ರ ವಿರುದ್ಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇದರೊಂದಿಗೆ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಈ ವಿಚಾರದ ಬಗ್ಗೆ ಮಾಹಿತಿ ನೀಡಲಾಗಿದೆ.
''ಫರೂಕಾಬಾದ್ ಪ್ರದೇಶದಲ್ಲಿ 31 ವರ್ಷದ ಯುವತಿ ತನ್ನ 26 ವರ್ಷದ ಸೋದರ ಸಂಬಂಧಿ ಯುವತಿಯನ್ನು ಪ್ರೀತಿಸುತ್ತಿದ್ದಾಳೆ. ಇಬ್ಬರು ಸಹೋದರಿಯರು ಯಾವಾಗಲೂ ಒಟ್ಟಿಗೆ ಎಲ್ಲ ಕಡೆ ಹೋಗುತ್ತಾರೆ. ಇಬ್ಬರೂ ಹುಡುಗಿಯರು ಬುಧವಾರ ಪರಸ್ಪರ ಮದುವೆಯಾಗಲು ನಿರ್ಧರಿಸಿದ್ದಾರೆ. ಈ ವಿಚಾರ ತಿಳಿದ ಇಬ್ಬರು ಯವತಿಯರ ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ'' ಎಂದು ಮೊಹಮ್ಮದಾಬಾದ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಮರ್‌ಪಾಲ್ ಸಿಂಗ್ ಹೇಳಿದ್ದಾರೆ.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು:''ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರೂ ಯುವತಿಯಿರಿಂದ ಮಾಹಿತಿ ಪಡೆದುಕೊಂಡರು. ಇದರೊಂದಿಗೆ ಇಬ್ಬರೂ ಯುವತಿಯರ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಲಾಯಿತು. ಅಲ್ಲದೇ, ಇಬ್ಬರೂ ಹುಡುಗಿಯರಿಗೆ ಸಾಕಷ್ಟು ತಿಳಿ ಹೇಳುವ ಪ್ರಯತ್ನವೂ ನಡೆದಿದೆ. ಇದರೊಂದಿಗೆ ಅವರ ಕುಟುಂಬದ ಸದಸ್ಯರು ಇಬ್ಬರೂ ಹುಡುಗಿಯರಿಗೆ ಸಾಕಷ್ಟು ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೂ ಕೂಡ ಈ ಇಬ್ಬರು ಹುಡುಗಿಯರು ಮದುವೆಯಾಗಲು ಹಠ ಹಿಡಿದಿದ್ದಾರೆ. ಇಬ್ಬರೂ ಹುಡುಗಿಯರು ಒಟ್ಟಿಗೆ ವಾಸಿಸಲು ಬಯಸುತ್ತಿದ್ದಾರೆ . ಈ ಬಗ್ಗೆ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.