ಆಗ್ರಾ( ಉತ್ತರಪ್ರದೇಶ):ಇಲ್ಲಿನ ಬಾಹ ತಹಶೀಲ್ನ ನಾಯಬ್ ತಹಸೀಲ್ದಾರ್ ಮೇಲೆ ಆಗ್ರಾದಲ್ಲಿ ಮೈನಿಂಗ್ ಮಾಫಿಯಾ ಗ್ಯಾಂಗ್ ಗುರುವಾರ ತಡರಾತ್ರಿ ಹಲ್ಲೆ ನಡೆಸಿರುವ ವರದಿಯಾಗಿದೆ. ಆಗ್ರಾದಲ್ಲಿ ಅಕ್ರಮ ಗಣಿಗಾರಿಕೆ ಕುರಿತು ಮಾಹಿತಿ ಪಡೆದ ತಹಸೀಲ್ದಾರ್, ತಮ್ಮ ತಂಡದೊಂದಿಗೆ ಜೈತ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಹ್ತೌಲಿ ಗ್ರಾಮಕ್ಕೆ ಭೇಟಿ ನೀಡಿ, ಮಾಫಿಯಾದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಮೈನಿಂಗ್ ಮಾಫಿಯಾ ಕಾರ್ಯಕರ್ತರು ತಹಸೀಲ್ದಾರ್ ಮೇಲೆ ಟ್ರ್ಯಾಕ್ಟರ್ ಹಾಗೂ ಜೆಸಿಬಿಯಿಂದ ದಾಳಿ ನಡೆಸಲು ಯತ್ನಿಸಿದ್ದಾರೆ. ಅವರ ವಾಹನಗಳ ಮೇಲೆ ದಾಳಿ ಮಾಡಿ ಜಖಂಗೊಳಿಸುವ ಯತ್ನ ಮಾಡಿದ್ದಾರೆ.
ಟ್ರ್ಯಾಕ್ಟರ್ ಮತ್ತು ಜೆಸಿಬಿ ಡಿಕ್ಕಿಯಾಗಿ ತಹಸೀಲ್ದಾರ್ ಅವರ ಕಾರು ಜಖಂಗೊಂಡಿದೆ. ನಾಯಿಬ್ ತಹಸೀಲ್ದಾರ್ ತಮ್ಮ ಪ್ರಾಣ ಉಳಿಸಿಕೊಳ್ಳಲು ಕಾರಿನಿಂದ ಕೆಳಗೆ ಇಳಿದು ಬಂದಿದ್ದಾರೆ. ಈ ವೇಳೆ ಅವರ ಮೇಲೆ ದಾಳಿಕೋರರು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಮಾಫಿಯಾ ಗ್ಯಾಂಗ್ನವರು ಮಾಡಿದ ಹಲ್ಲೆಯಿಂದ ತಹಸೀಲ್ದಾರ್ ಗಾಯಗೊಂಡಿದ್ದಾರೆ. ಮತ್ತೊಂದು ಕಡೆ ತಹಶೀಲ್ದಾರ್ ಜತೆ ಆಗಮಿಸಿದ್ದ ಕಂದಾಯ ಇಲಾಖೆ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಹಾಗೂ ತಹಸೀಲ್ದಾರ್ ಹೊಲದ ಕಡೆ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ.
ಈ ಮಾಹಿತಿ ತಿಳಿದ ತಕ್ಷಣ ಹೆಚ್ಚುವರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಗೊಂಡ ತಹಸೀಲ್ದಾರ್ ಅವರನ್ನು ಬಾಹ್‌ನ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಬಳಿಕ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ ಏಳು ಟ್ರ್ಯಾಕ್ಟರ್ ಟ್ರಾಲಿಗಳನ್ನು ಪೊಲೀಸರು ಮತ್ತು ಕಂದಾಯ ತಂಡ ವಶಪಡಿಸಿಕೊಂಡಿದೆ.
ಘಟನೆ ಹಿನ್ನೆಲೆ:ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಅಕ್ರಮ ಗಣಿಗಾರಿಕೆ ಕುರಿತು ಬಹ ತಹಸೀಲ್ದಾರ್ ಅವರಿಗೆ ಮಾಹಿತಿ ಬಂದಿತ್ತು. ಈ ಮಾಹಿತಿ ಪಡೆದ ನಾಯಬ್ ತಹಸೀಲ್ದಾರ್, ತಮ್ಮ ಕಂದಾಯ ಇಲಾಖೆ ತಂಡದೊಂದಿಗೆ ಜೈತ್‌ಪುರ ಪೊಲೀಸ್ ಠಾಣೆಯ ನಹ್ತೌಲಿ ಗ್ರಾಮಕ್ಕೆ ತೆರಳಿದ್ದರು. ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿದ ವೇಳೆ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು. ಈ ವೇಳೆ, ಮೈನಿಂಗ್ ಮಾಫಿಯಾದ ಗ್ಯಾಂಗ್ ಇವರ ಮೇಲೆ ಹಲ್ಲೆ ಮಾಡಿದೆ.