ಚಾಯಿಬಾಸಾ (ಜಾರ್ಖಂಡ್): ದೇಶಾದ್ಯಂತ ಲವ್ ಜಿಹಾದ್ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಇಂತಹುದೇ ಪ್ರಕರಣವೊಂದು ಪಶ್ಚಿಮ ಸಿಂಗ್ ಭೂಮ್ ಜಿಲ್ಲೆಯ ಚಾಯಿಬಾಸಾದಲ್ಲಿ ವರದಿಯಾಗಿದೆ. ಅನ್ಯ ಧರ್ಮದ ಯುವಕನೋರ್ವ ತನ್ನ ಹೆಸರನ್ನು ಮರೆಮಾಚಿ ಬಾಲಕಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಮೋಸ ಮಾಡಿರುವ ಘಟನೆ ನಡೆದಿದೆ. ಅಷ್ಟೇ ಅಲ್ಲದೆ ಯುವಕ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಗರ್ಭಪಾತ ಮಾಡಿಸಿದ್ದು, ಈ ಬಗ್ಗೆ ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಚಕ್ರಧರಪುರದ ಅದ್ನಾನ್ ಖಾನ್ ಎಂದು ಗುರುತಿಸಲಾಗಿದೆ.
ಕಳೆದ ಎರಡು ವರ್ಷಗಳ ಹಿಂದೆ ಆರೋಪಿ ಅದ್ನಾನ್ ಖಾನ್ ಸಂತ್ರಸ್ತ ಬಾಲಕಿಯನ್ನು ಪರಿಚಯಿಸಿಕೊಂಡಿದ್ದ. ಈ ವೇಳೆ ಆರೋಪಿಯು ತನ್ನ ಹೆಸರನ್ನು ಮರೆಮಾಚಿ ಅಮಿತ್ ಕುಮಾರ್ ಎಂದು ಹೇಳಿಕೊಂಡಿದ್ದ. ಬಳಿಕ ಇಬ್ಬರ ನಡುವಿನ ಪರಿಚಯ ಪ್ರೀತಿಗೆ ತಿರುಗಿದೆ. ಈ ನಡುವೆ ಬಾಲಕಿ ಅದ್ನಾನ್ ಬಳಿ ಆತನ ಧರ್ಮದ ಬಗ್ಗೆ ಕೇಳಿದ್ದರೂ, ಆರೋಪಿ ತನ್ನನ್ನು ತಾನು ಬಿಹಾರಿ ಎಂದು ಹೇಳಿಕೊಂಡಿದ್ದ. ಈತನನ್ನು ನಂಬಿದ ಬಾಲಕಿ ಅದ್ನಾನ್ನನ್ನು ಮದುವೆಯಾಗಲು ಒಪ್ಪಿಕೊಂಡಿದ್ದಳು. ಬಳಿಕ ಇಬ್ಬರೂ ದೇವಗಾಂವ್ನಲ್ಲಿರುವ ಶಿವ ದೇವಾಲಯದಲ್ಲಿ ಮದುವೆಯಾಗಿದ್ದಾರೆ.
ಮದುವೆಯ ಬಳಿಕ ಅದ್ನಾನ್ ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಅದ್ನಾನ್ ಮನೆಯವರು ಬಾಲಕಿಯು ಅಪ್ರಾಪ್ತೆಯಾಗಿದ್ದರಿಂದ ಮನೆಯಲ್ಲಿ ಇರಿಸಿಕೊಳ್ಳಲು ನಿರಾಕರಿಸಿದ್ದಾರೆ. ಬಳಿಕ ಆರೋಪಿ ಅದ್ನಾನ್ ಖಾನ್ ಬಾಲಕಿಯನ್ನು ಒಂದು ದಿನದ ಮಟ್ಟಿಗೆ ತನ್ನ ಮನೆಯಲ್ಲಿರಿಸಿ ಬಳಿಕ ಮರುದಿನ ಬಾಲಕಿಯನ್ನು ಆಕೆಯ ಮನೆಗೆ ಬಿಟ್ಟು ಬಂದಿದ್ದಾನೆ. ಬಳಿಕವೂ ಇಬ್ಬರೂ ಪರಸ್ಪರ ಭೇಟಿಯನ್ನು ಮುಂದುವರೆಸಿದ್ದಾರೆ. ಈ ನಡುವೆ ಬಾಲಕಿ ಗರ್ಭಿಣಿಯಾಗಿದ್ದು, ಅದ್ನಾನ್ ಬಾಲಕಿಗೆ ಔಷಧಿಯನ್ನು ನೀಡಿ ಗರ್ಭಪಾತ ಮಾಡಿಸಿದ್ದಾನೆ. ಬಳಿಕ ಮತ್ತೆ ಇಬ್ಬರೂ ಪರಸ್ಪರ ಭೇಟಿ ಮುಂದುವರೆಸಿದ್ದು, ಮತ್ತೊಮ್ಮೆ ಬಾಲಕಿ ಗರ್ಭಿಣಿಯಾಗಿದ್ದಾಳೆ.