ಭಿಲ್ವಾರಾ (ರಾಜಸ್ಥಾನ): ಮದುವೆಯಾದ ಕೆಲವೇ ಗಂಟೆಗಳಲ್ಲಿ ಯುವತಿಯನ್ನು ಆಕೆಯ ಮಾಜಿ ಪ್ರೇಮಿ ಮತ್ತು ಇಬ್ಬರು ಸಹಚರರು ಅಪಹರಿಸಿದ್ದಾರೆ. ಈ ಘಟನೆ ರಾಜಸ್ಥಾನದ ಭಿಲ್ವಾರದಲ್ಲಿ ನಡೆದಿದೆ. ಮದುವೆಯ ವಿಧಿವಿಧಾನ ಮುಗಿಸಿ ವಾಪಸಾಗುತ್ತಿದ್ದಾಗ ಮೂವರು ವ್ಯಕ್ತಿಗಳು ಕತ್ತಿ ಝಳಪಿಸುತ್ತಾ ಬೈಕ್‌ನಲ್ಲಿ ಬಂದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಘಟನೆ ನಡೆದು 48 ಗಂಟೆಗಳಾದರೂ ಯುವತಿ ಇನ್ನೂ ಪತ್ತೆಯಾಗಿಲ್ಲ.
ಭಿಲ್ವಾರಾ ಜಿಲ್ಲೆಯ ಬಿಜೋಲಿಯಾದ ಯುವಕ ಶುಕ್ರವಾರ ಲಚುಡಾ ಗ್ರಾಮದ ಯುವತಿಯನ್ನು ವಿವಾಹವಾಗಿದ್ದರು. ನವಜೋಡಿ ವರನ ಕುಟುಂಬ ಸದಸ್ಯರೊಂದಿಗೆ ಭಿಲ್ವಾರದ ಕೃಷಿ ಮಂಡಿಗೆ ಆಶೀರ್ವಾದ ಪಡೆಯಲು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಮೂವರು ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದಿದ್ದಾರೆ. ವರ ಮತ್ತು ಆತನ ಕುಟುಂಬ ಸದಸ್ಯರನ್ನು ತಡೆದು, ಕತ್ತಿಗಳಿಂದ ಹಲ್ಲೆ ನಡೆಸಿ ನವ ವಧುವನ್ನು ಅಪಹರಿಸಿದ್ದಾರೆ. ನಂತರ ಯುವಕ ಭಿಲ್ವಾರದ ಸುಭಾಷ್ ನಗರ ಪೊಲೀಸ್ ಠಾಣೆಯಲ್ಲಿ ದೀಪಕ್ ಕೋಲಿ ಮತ್ತು ಆತನ ಸಹಚರರ ವಿರುದ್ಧ ಕತ್ತಿ ತೋರಿಸಿ ಪತ್ನಿಯನ್ನು ಅಪಹರಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ಅಪಹರಣಕಾರರಿಗೆ ಹುಡುಕಾಟ: "ಮೂವರು ದುಷ್ಕರ್ಮಿಗಳ ವಿರುದ್ಧ ಅಪಹರಣ ದೂರು ದಾಖಲಾಗಿದೆ. ನಾವು ಪ್ರಕರಣ ದಾಖಲಿಸಿಕೊಂಡು ವಧು ಮತ್ತು ಆಕೆಯ ಅಪಹರಣಕಾರರಿಗಾಗಿ ಹುಡುಕಾಟ ಆರಂಭಿಸಿದ್ದೇವೆ" ಎಂದು ಸುಭಾಷ್ ನಗರ ಪೊಲೀಸ್ ಠಾಣೆ ಪ್ರಭಾರಿ ಜಗದೀಶ್ ಚಂದ್ರ ಮೀನಾ ತಿಳಿಸಿದರು.
ಇದನ್ನೂ ಓದಿ:Encounter: ನೇಪಾಳ ಗಡಿಯಲ್ಲಿ ಬಿಹಾರ ಪೊಲೀಸರಿಂದ ಗುಂಡಿನ ದಾಳಿ.. ಇಬ್ಬರು ದರೋಡೆಕೋರರ ಎನ್ಕೌಂಟರ್