ಮುಂಬೈ: ಜೂನ್ 24 ರ ಸಂಜೆ ಮುಂಬೈ ಮತ್ತು ಪುಣೆ ನಗರದಲ್ಲಿ ಬಾಂಬ್ ಸ್ಫೋಟದ ಬೆದರಿಕೆಯೊಡ್ಡಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಆರೋಪಿಯನ್ನು ಉತ್ತರ ಪ್ರದೇಶದ ಜಾನ್‌ಪುರದಲ್ಲಿ ಬಂಧಿಸಿದ್ದಾರೆ. ಬಂಧಿತನಾಗಿರುವ ಆರೋಪಿ ಹೆಸರು ದರ್ವೇಶ್ ರಾಜ್‌ಭರ್ ಎಂದು ಪೊಲೀಸರು ತಿಳಿಸಿದ್ದಾರೆ.
ಜೂನ್ 22 ಮತ್ತು 23 ರಂದು ಬೆಳಗ್ಗೆ ಮುಂಬೈ ಪೊಲೀಸ್ ಪಡೆಗಳ ವಾಟ್ಸ್ಆ್ಯಪ್ ಸಂಖ್ಯೆಗೆ ಅಂಧೇರಿ ಕುರ್ಲಾ ಪ್ರದೇಶದಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆಯ ಸಂದೇಶವನ್ನು ಕಳುಹಿಸಲಾಗಿದೆ. ಈ ಬಗ್ಗೆ ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಅಂಬೋಲಿ ಪೊಲೀಸ್ ಠಾಣೆಯಲ್ಲಿ IPC ಸೆಕ್ಷನ್ 278/23 u/s 505 (1)(B), 505(2), 185 ಅಡಿ ಬಾಂಬ್ ಕುರಿತಾಗಿ ಬಂದಿರುವ ಮೆಸೇಜ್ ಕುರಿತು ಪ್ರಕರಣ ದಾಖಲಿಸಿಕೊಂಡರು. ನಂತರ ಪ್ರಕರಣದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾಗ, ತಾಂತ್ರಿಕ ಮಾಹಿತಿಯ ಆಧಾರದ ಮೇಲೆ, ಪೊಲೀಸರು ಯುಪಿಯ ಜಾನ್‌ಪುರದಿಂದ ಆರೋಪಿ ದರ್ವೇಶ್ ರಾಜ್‌ಭರ್‌ನನ್ನು ಪತ್ತೆ ಮಾಡಿದರು.
ಪೊಲೀಸರಿಗೆ ಕೇವಲ ಬಾಂಬ್ ಸ್ಪೋಟದ ಬಗ್ಗೆ ಸಂದೇಶ ಅಲ್ಲದೇ, ಮುಂಬೈ ಮತ್ತು ಪುಣೆಯಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ದರ್ವೇಶ್ ರಾಜ್‌ಭರ್ ಅದನ್ನು ಸ್ಫೋಟಿಸಲು ಎರಡು ಕೋಟಿ ಪಡೆದಿದ್ದ ಎಂದು ಕೂಡ ಸಂದೇಶದಲ್ಲಿ ತಿಳಿಸಲಾಗಿದೆ. ಅಷ್ಟೇ ಅಲ್ಲ, ಎರಡು ಲಕ್ಷ ರೂಪಾಯಿ ಕೊಟ್ಟರೆ ಈ ಬಾಂಬ್ ಸ್ಫೋಟಗಳನ್ನು ತಪ್ಪಿಸಬಹುದು ಮತ್ತು ನಾನು ನನ್ನ ಆಳುಗಳ ಜೊತೆ ಮಲೇಷ್ಯಾಕ್ಕೆ ಹೊರಡುತ್ತೇನೆ ಎಂದು ನಮೂದಿಸಿದ್ದರು.