ಮುಂಬೈ (ಮಹಾರಾಷ್ಟ್ರ):ಮುಂಬೈನ ಚರ್ಚ್‌ಗೇಟ್ ಪ್ರದೇಶದ ಸಾವಿತ್ರಿಬಾಯಿ ಫುಲೆ ಬಾಲಕಿಯರ ಹಾಸ್ಟೆಲ್‌ನಲ್ಲಿ 19 ವರ್ಷದ ಯುವತಿಯೊಬ್ಬಳ ಶವ ನಗ್ನಾವಸ್ಥೆಯಲ್ಲಿ ಕಂಡುಬಂದಿದೆ. ಕೊಠಡಿಯಲ್ಲಿ ಕುತ್ತಿಗೆಗೆ ದುಪ್ಪಟ್ಟ ಸುತ್ತಿಕೊಂಡ ರೀತಿಯಲ್ಲಿ ಶವ ದೊರೆತಿದೆ. ಅತ್ಯಾಚಾರ ಎಸಗಿ ಕೊಲೆಗೈದಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಹಾಸ್ಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಓಂಪ್ರಕಾಶ್ ಕನೋಜಿಯಾ ಎಂಬ ಉದ್ಯೋಗಿಯ ಮೇಲೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು, ಆತನಿಗಾಗಿ ಹುಡುಕಾಟ ನಡೆಸಿದ್ದರು. ಆದರೆ, ಈ ಸುದ್ದಿ ಗೊತ್ತಾಗುತ್ತಿದ್ದಂತೆ ಆತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮತ್ತು ಮೃತದೇಹ ಚಾರ್ನಿ ರೈಲು ನಿಲ್ದಾಣದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಯುವತಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೆರೈನ್ ಡ್ರೈವ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಪೊಲೀಸರಿಗೆ ಸಿಕ್ಕಿಬೀಳಬಹುದೆಂಬ ಭಯದಿಂದಲೇ ಆರೋಪಿ ಲೋಕಲ್ ರೈಲಿನ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಮಾಡಿಕೊಂಡಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆರೋಪಿ ಕನೋಜಿಯಾ ಮೂಲತಃ ಉತ್ತರ ಪ್ರದೇಶದನಾಗಿದ್ದು, ಸಂಬಂಧಿಕರು ಕೂಡ ಆತನ ಮೃತದೇಹ ಗುರುತಿಸಿದ್ದಾರೆ.
ಹಾಸ್ಟೆಲ್‌ನಲ್ಲಿದ್ದ ಸಿಸಿಟಿವಿ ವಿಡಿಯೋ ಪರಿಶೀಲನೆ ಮಾಡಲಾಗಿದೆ. ವಿಧಿವಿಜ್ಞಾನ ತಂಡವು ವಿದ್ಯಾರ್ಥಿನಿಯ ಕೊಠಡಿಯಿಂದ ಕೆಲವು ವಸ್ತುಗಳ ಮಾದರಿಯನ್ನು ತೆಗೆದುಕೊಂಡಿದೆ. ತಲೆಮರೆಸಿಕೊಂಡಿರುವ ಆರೋಪಿ ಈತನೇ ಆಗಿರಬಹುದು ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಮಂಗಳವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಹಾಸ್ಟೆಲ್‌ನಿಂದ ಹೊರಹೋಗುತ್ತಿರುವುದು ಹಾಸ್ಟೆಲ್‌ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.ಅಭಿನವ್ ದೇಶಮುಖ್ ತಿಳಿಸಿದ್ದಾರೆ.
ಮೃತ ಯುವತಿಯು ಬಾಂದ್ರಾ ಪಾಲಿಟೆಕ್ನಿಕ್‌ನ ಎರಡನೇ ವರ್ಷದ ಕೋರ್ಸ್‌ನಲ್ಲಿ ಓದುತ್ತಿದ್ದಳು. ಖಾಸಗಿ ಕಂಪನಿಯೊಂದರಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದರು. ಗುರುವಾರ ತನ್ನ ಊರಿಗೆ ತೆರಳಲು ಸಿದ್ಧತೆ ನಡೆಸಿದ್ದರು. ಹಾಸ್ಟೆಲ್‌ನಲ್ಲಿದ್ದ ಹಲವು ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳಿಗೆ ತೆರಳಿದ್ದರು. ಉಳಿದ ಕೆಲವರ ಜೊತೆ ರಾತ್ರಿ 11.30ರ ಸುಮಾರಿಗೆ ಮಾತನಾಡಿದ್ದರು. ಆದರೆ, ಹಾಸ್ಟೆಲ್‌ನ ನಾಲ್ಕನೇ ಮಹಡಿಯಲ್ಲಿ ಯುವತಿ ಮಾತ್ರ ಉಳಿದುಕೊಂಡಿದ್ದರು. ಕನೋಜಿಯಾ ಈ ಪರಿಸ್ಥಿತಿಯ ಲಾಭ ಪಡೆದಿರಬಹುದು. ಸದ್ಯ ಹಾಸ್ಟೆಲ್‌ನಲ್ಲಿ ಬಿಟ್ಟು ಹೋಗಿದ್ದ ಆರೋಪಿಯ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಚಾರ್ನಿ ರೈಲ್ವೆ ಪೊಲೀಸರಿಂದಲೂ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
"ಇದು ಅತ್ಯಂತ ಆತಂಕಕಾರಿ ವಿಷಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಮಹಿಳೆಯರ ಸುರಕ್ಷತೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಸಾವಿತ್ರಿಬಾಯಿ ಫುಲೆ ಬಾಲಕಿಯರ ಹಾಸ್ಟೆಲ್‌ನಲ್ಲಿ ನಡೆದ ಘಟನೆ ಸರ್ಕಾರದ ವಿಫಲತೆಗೆ ಮತ್ತೊಂದು ಕಾರಣ. ಹಾಸ್ಟೆಲ್‌ಗಳಲ್ಲಿ ಭದ್ರತಾ ವ್ಯವಸ್ಥೆ ಹೆಚ್ಚಾಗಬೇಕು. ಹಾಸ್ಟೆಲ್‌ನೊಳಗೆ ಸಿಸಿಟಿವಿ ಕ್ಯಾಮರಾ ಸೇರಿದಂತೆ ಇತರೆ ಮುನ್ನೆಚ್ಚರಿಕೆ ಸಾಧನಗಳನ್ನು ಅಳವಡಿಸಬೇಕು. ಸಹಾಯವಾಣಿ ಸಂಖ್ಯೆಗಳನ್ನು ಸಹ ಸ್ಥಾಪಿಸಬೇಕು" ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಐಫೋನ್ಗಳೇ ಇವರ ಟಾರ್ಗೆಟ್; ಒಂಟಿಯಾಗಿ ಓಡಾಡುವವರ ಸುಲಿಗೆ ಮಾಡುತ್ತಿದ್ದ ಆರೋಪಿಗಳ ಬಂಧನ