ನಾಗಪುರ (ಮಹಾರಾಷ್ಟ್ರ): ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಗೇಮ್‌ಗಳನ್ನು ಆಡಿ ಹಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಆರೋಪಿಗಳು ಅಮಾಯಕರಿಗೆ ಮೋಸ ಮಾಡಿ ಹಣ ಗಳಿಸುತ್ತಿದ್ದಾರೆ. ಹೆಚ್ಚು ಹಣ ಮಾಡುವ ಆಸೆಗೆ ಬಿದ್ದು, ಇದ್ದ ಹಣವನ್ನು ಕಳೆದುಕೊಂಡು ಜನರು ಬೀದಿಗೆ ಬೀಳುತ್ತಿದ್ದಾರೆ. ಇಂಥದ್ದೇ ಒಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಖ್ಯಾತ ಉದ್ಯಮಿಯೊಬ್ಬರು ಆನ್ಲೈನ್ ಗೇಮಿನ ಗೀಳಿಗೆ ಬಿದ್ದು 58 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ನಾಗಪುರ ಜಿಲ್ಲೆಯ ಉದ್ಯಮಿಯೊಬ್ಬರು ಆನ್ಲೈನ್ ಗೇಮಿಂಗ್ ಮೂಲಕ ಹೆಚ್ಚು ಹಣ ಸಂಪಾದಿಸುವ ವಂಚನೆಯ ಜಾಲದಲ್ಲಿ ಸಿಲುಕಿ ಕೋಟಿಗಟ್ಟಲೆ ಹಣ ಕಳೆದುಕೊಂಡಿದ್ದಾರೆ. ಈ ಸಂಬಂಧ ಉದ್ಯಮಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ. ಉದ್ಯಮಿ ಗುರುತನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ಸಂತ್ರಸ್ತ ಉದ್ಯಮಿಯು ಹೆಚ್ಚು ಹಣ ಗಳಿಸುವ ಉದ್ದೇಶದಿಂದ ಆನ್ಲೈನ್ ಗೇಮ್ನ ಚಟಕ್ಕೆ ಬಿದ್ದಿದ್ದರು. ಆನ್ಲೈನ್ನಲ್ಲಿ ಆಟ ಆಡುವ ಮೂಲಕ ಉದ್ಯಮಿಯು ನವೆಂಬರ್ 2021ರಿಂದ 2023ರವರೆಗೆ 58 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಈ ಸಂಬಂಧ ಆರೋಪಿ ಅನಂತ್ ನವರಥನ್ ಜೈನ್ ಎಂಬವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಗೊಂಡಿಯಾ ಜಿಲ್ಲೆಯಲ್ಲಿರುವ ಆರೋಪಿ ಅನಂತ್ ಮನೆ ಮೇಲೆ ದಾಳಿ ನಡೆಸಿದ್ದಾರೆ. 4 ಕೆಜಿ ಚಿನ್ನಾಭರಣ ಮತ್ತು 17 ಕೋಟಿ ನಗದು ವಶಕ್ಕೆ ಪಡೆದಿದ್ದಾರೆ. ಆರೋಪಿ ಅನಂತ್ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಆನ್ಲೈನ್ ಗೇಮಿಂಗ್ ಆ್ಯಪ್ ಮೂಲಕ ಮೋಸ :ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಪ್ರಕರಣದ ಆರೋಪಿ ಅನಂತ್ ನವರಥನ್ ಜೈನ್ ಆನ್ಲೈನ್ ಗೇಮಿಂಗ್ ಆ್ಯಪ್ ಮೂಲಕ ಕೋಟ್ಯಂತರ ರೂಪಾಯಿ ಹಣ ಗಳಿಸುವ ಆಮಿಷ ಒಡ್ಡುತ್ತಿದ್ದ. ಆರೋಪಿಯು ಆನ್ಲೈನ್ ಗೇಮಿಂಗ್ ಆ್ಯಪ್ನಲ್ಲಿ 24 ಗಂಟೆಗಳ ಕಾಲ ಬೆಟ್ಟಿಂಗ್ ನಡೆಸುತ್ತಿದ್ದನು ಎಂದು ತಿಳಿಸಿದ್ದಾರೆ. ಇದೇ ರೀತಿ ಆರೋಪಿಯು ಉದ್ಯಮಿಗೆ ಆನ್ಲೈನ್ ಗೇಮ್ನ ಲಿಂಕ್ ಮತ್ತು ಯೂಸರ್ ನೇಮ್ ಮತ್ತು ಆನ್ಲೈನ್ ಪಾಸ್ವರ್ಡ್ಗಳನ್ನು ಕಳುಹಿಸುತ್ತಿದ್ದ. ಬಳಿಕ ಇಲ್ಲಿ ಹಣ ಹಾಕುವಂತೆ ಒತ್ತಾಯಿಸುತ್ತಿದ್ದ.
ಉದ್ಯಮಿಯು ತನ್ನಲ್ಲಿದ್ದ ಹಣ ಮಾತ್ರವಲ್ಲದೆ, ಗೆಳೆಯರಿಂದಲೂ ಸಾಲ ಹಣ ಪಡೆದು ಆನ್ಲೈನ್ ಗೇಮ್ ಆಡಿದ್ದರು. ಇದರಿಂದ ಉದ್ಯಮಿ ಹಣ ಕಳೆದುಕೊಂಡಿದಲ್ಲದೇ, ಆರೋಪಿಯು ಹೆಚ್ಚು ಹಣ ಗಳಿಸುತ್ತಿದ್ದನು. ಇದರಿಂದ ಅನುಮಾನಗೊಂಡ ಉದ್ಯಮಿಯು ತನ್ನ ಹಣವನ್ನು ಮರಳಿ ನೀಡುವಂತೆ ಒತ್ತಾಯಿಸಿದ್ದಾರೆ. ಇದರಿಂದ ಕೋಪಗೊಂಡ ಅನಂತ್, ಉದ್ಯಮಿಗೆ ಕೊಲೆ ಬೆದರಿಕೆ ಹಾಕಿ 40 ಲಕ್ಷ ರೂ ಕೊಡುವಂತೆ ತಾಕೀತು ಮಾಡಿದ್ದ. ಇದರಿಂದ ಬೇಸತ್ತ ಉದ್ಯಮಿಯು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಆರೋಪಿ ನಕಲಿ ಗೇಮಿಂಗ್ ಲಿಂಕ್ಗಳನ್ನು ಸೃಷ್ಟಿಸಿ ಉದ್ಯಮಿಗೆ ಸುಮಾರು 58 ಕೋಟಿ 42 ಲಕ್ಷದ 16 ಸಾವಿರದ 300 ರೂಪಾಯಿ ಮೋಸ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಆನ್ಲೈನ್ ಗೇಮಿಂಗ್ನಿಂದಾಗಿ ಉದ್ಯಮಿಯು ತನ್ನೆಲ್ಲ ಹಣವನ್ನು ಕಳೆದುಕೊಂಡಿದ್ದಲ್ಲದೇ ತನ್ನ ಸ್ನೇಹಿತರಿಂದ ಪಡೆದ ಹಣವನ್ನು ಕಳೆದುಕೊಂಡಿದ್ದಾರೆ. ಕೇಸು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ :ದಲಿತ ವ್ಯಕ್ತಿ ಸ್ಪರ್ಶಿಸಿದ್ದಕ್ಕೆ ಕೋಪಗೊಂಡು ಮುಖ, ದೇಹದ ಮೇಲೆ ಮಲ ಎರಚಿ ವಿಕೃತಿ ಮೆರೆದ ವ್ಯಕ್ತಿ!