ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಕೊಲೆಯ ಘಟನೆಗಳು ನಿರಂತರವಾಗಿ ಮುನ್ನೆಲೆಗೆ ಬರುತ್ತಿವೆ. ದೆಹಲಿ ಗ್ರಾಮಾಂತರ ಪ್ರದೇಶದ ನಜಾಫ್‌ಗಢ್ ಪ್ರದೇಶದಿಂದ ಇಂತಹದೊಂದು ಸಂವೇದನಾಶೀಲ ಪ್ರಕರಣ ಮುನ್ನೆಲೆಗೆ ಬಂದಿದೆ. ಸೋಮವಾರ ರಾತ್ರಿ ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ (Man Shot Dead) ಮಾಡಲಾಗಿದೆ. ತನಿಖೆಯಲ್ಲಿ ಮೃತರನ್ನು 36 ವರ್ಷದ ಧೀರೇಂದ್ರ ಎಂದು ಗುರುತಿಸಲಾಗಿದೆ. ಅವರು ವೃತ್ತಿಯಲ್ಲಿ ಟ್ಯಾಕ್ಸಿ ಚಾಲಕರಾಗಿದ್ದರು.
ಆರೋಪಿಗಳು ನಿರ್ಭಯವಾಗಿಯೇ ಈ ಘಟನೆ ನಡೆಸಿದ್ದಾರೆ ಎನ್ನಲಾಗ್ತಿದೆ. ಕಾರಿನೊಳಗಿದ್ದ ಧೀರೇಂದ್ರ ಕುತ್ತಿಗೆಗೆ ಗುಂಡು ಹಾರಿಸಲಾಗಿದೆ. ಪೊಲೀಸರ ಮಾಹಿತಿಯ ಪ್ರಕಾರ, ಧೀರೇಂದ್ರ ಅವರು ತಮ್ಮ ಟ್ಯಾಕ್ಸಿಯೊಂದಿಗೆ ಖೈರಾ ರಸ್ತೆಯನ್ನು ತಲುಪಿದ್ದರು. ಈ ವೇಳೆ ಹಿಂದಿನಿಂದ ಸೆಲೆರಿಯೊ ವಾಹನದಲ್ಲಿ ವ್ಯಕ್ತಿಯೊಬ್ಬರು ಅಲ್ಲಿಗೆ ಬಂದಿದ್ದಾರೆ. ಕಾರಿನಿಂದ ಇಳಿದು ಧೀರೇಂದ್ರನ ಕಾರಿನಲ್ಲಿ ಬಂದು ಕುಳಿತಿದ್ದಾರೆ. ಸ್ವಲ್ಪ ಸಮಯದ ನಂತರ ಧೀರೇಂದ್ರನನ್ನು ಗುಂಡಿಕ್ಕಿ ಕೊಂದು ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದ್ವಾರಕಾ ಡಿಸಿಪಿ ಎಂ.ಹರ್ಷವರ್ಧನ್ ಅವರು ಈ ಕುರಿತು ಹೇಳಿಕೆ ನೀಡಿದ್ದು, ಸ್ಥಳದಲ್ಲಿಯೇ ಗುಂಡಿನ ದಾಳಿ ನಡೆದಿರುವ ಬಗ್ಗೆ ಸಾಕ್ಷ್ಯ ಸಿಕ್ಕಿದೆ. ಪರಸ್ಪರ ವೈಷಮ್ಯದಿಂದ ಈ ಘಟನೆ ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬರುತ್ತಿದೆ. ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಆದಷ್ಟು ಬೇಗ ಆರೋಪಿಯನ್ನು ವಶಕ್ಕೆ ಪಡೆಯುತ್ತೇವೆ ಎಂದು ತಿಳಿಸಿದ್ದಾರೆ.
ಆರೋಪಿಯ ಗುರುತು ಬಹುತೇಕ ಖಚಿತ: ಸ್ಥಳೀಯ ಗುಪ್ತಚರ ಮತ್ತು ತಾಂತ್ರಿಕ ಕಣ್ಗಾವಲು ನೆರವಿನಿಂದ ಪೊಲೀಸರು ಶಂಕಿತ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಆತನ ಬಂಧನಕ್ಕೆ ಹಲವೆಡೆ ದಾಳಿ ನಡೆಯುತ್ತಿದೆ. ದೆಹಲಿ ಪೊಲೀಸರ ಕೈಗೆ ಆರೋಪಿ ಶೀಘ್ರವೇ ಸಿಕ್ಕಿಬೀಳಲಿದ್ದಾರೆ. ಈ ಪ್ರಕರಣದ ನಿಗೂಢತೆಯನ್ನು ಭೇದಿಸಲು ನಜಾಫ್‌ಗಢ ಉಪವಿಭಾಗದ ಪೊಲೀಸ್ ತಂಡವಲ್ಲದೇ, ಆಪರೇಷನ್ ಸೆಲ್‌ನ ವಿಶೇಷ ಸಿಬ್ಬಂದಿ, ಆಂಟಿ ಆಟೋ ಥೆಫ್ಟ್ ಸ್ಕ್ವಾಡ್ ಮತ್ತು ದ್ವಾರಕಾ ಜಿಲ್ಲೆಯ ಜೈಲ್ ಬೆಲ್ ಸೆಲ್ ತಂಡವನ್ನು ಸಹ ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಓದಿ:ಬೆಂಗಳೂರಲ್ಲಿ ಹಲವು ವರ್ಷಗಳಿಂದ ಪಾರ್ಕ್ ಮಾಡಲಾಗಿದ್ದ ಕಾರಿನಲ್ಲಿ ಶವ ಪತ್ತೆ.. ಬೆಳಕಿಗೆ ಬಂದಿದ್ದು ಹೀಗೆ!
ಕಾರಿನಲ್ಲಿ ಶವ ಪತ್ತೆ: ಜೂನ್ 9ರಂದು ಉತ್ತರ ದೆಹಲಿಯ ಸಿವಿಲ್ ಲೈನ್ ಪೊಲೀಸ್ ಠಾಣೆ ವ್ಯಾಪ್ತಿಯ ಸಂತ ಪರಮಾನಂದ ಆಸ್ಪತ್ರೆ ಹೊರಗೆ ನಿಲ್ಲಿಸಿದ್ದ ಕಾರಿನಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಯ ಶವ ಪತ್ತೆಯಾಗಿತ್ತು. ಕಾರಿನ ಇಂಜಿನ್ ಆನ್ ಆಗಿದ್ದು, ವ್ಯಕ್ತಿಯ ಬಾಯಿಂದ ನೊರೆ ಬರುತ್ತಿರುವುದು ಕಂಡು ಬಂದಿತ್ತು. ಈ ವೇಳೆ, ದಾರಿಹೋಕರೊಬ್ಬರು ಸಿವಿಲ್ ಲೈನ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸ್ ತಂಡ ಕಾರಿನ ಹಿಂಬದಿಯ ಗಾಜು ಒಡೆದು ಯುವಕನನ್ನು ಹೊರತೆಗೆದು ಸಂತ ಪರಮಾನಂದ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ತಪಾಸಣೆ ನಡೆಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ಘಟನೆ ಬಳಿಕ ಪೊಲೀಸರು ತನಿಖೆ ಕೈಗೊಂಡಿದ್ದರು.
ಜೂನ್ 9ರ ಶುಕ್ರವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಸಿವಿಲ್ ಲೈನ್ ಪೊಲೀಸ್ ಠಾಣೆ ಪೊಲೀಸರಿಗೆ ಘಟನೆಯ ಬಗ್ಗೆ ಮಾಹಿತಿ ಲಭಿಸಿತ್ತು ಎಂದು ಉತ್ತರ ಜಿಲ್ಲಾ ಡಿಸಿಪಿ ಸಾಗರ್ ಸಿಂಗ್ ಕಲ್ಸಿ ತಿಳಿಸಿದ್ದರು. ಬಳಿಕ ಪೊಲೀಸರು ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಮೃತರನ್ನು ಬ್ರಹ್ಮಪುರಿ ನಿವಾಸಿ ಸುಮಿತ್ (21) ಎಂದು ಗುರುತಿಸಲಾಗಿದೆ. ಸುಮಿತ್ ಪರಮಾನಂದ ಆಸ್ಪತ್ರೆ ಬಳಿ ಹೇಗೆ ಬಂದರು ಮತ್ತು ಕಾರಿನಲ್ಲಿ ಅವರು ಹೇಗೆ ಸಾವನ್ನಪ್ಪಿದರು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ತಿಳಿಸಿದ್ದರು.