ಚಂಡಿಗಢ (ಪಂಜಾಬ್): ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಪಂಜಾಬ್ ಪೊಲೀಸರ ಕಾರ್ಯಾಚರಣೆ ಮುಂದುವರೆದಿದೆ. ಕೋಟ್ಯಂತರ ಮೌಲ್ಯದ 77 ಕೆಜಿ ಹೆರಾಯಿನ್ ಅನ್ನು ಪೊಲೀಸರು ಜಪ್ತಿ ಮಾಡಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಮೂರು ಪಿಸ್ತೂಲ್ಗಳನ್ನು ವಶಕ್ಕೆ ಪಡೆದಿದ್ದಾರೆ.
"ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಕ್ರಮವಾಗಿ 41 ಕೆಜಿ ಹಾಗೂ 31 ಕೆಜಿ ಸೇರಿ ಒಟ್ಟಾರೆ 77 ಕೆಜಿ ಹೆರಾಯಿನ್ ಜಪ್ತಿಯಾಗಿದೆ. ಪ್ರಸ್ತುತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ 400 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ದೇಶದ ಗಡಿಯಾಚೆಗಿನ ಹಾಗೂ ಅಂತಾರಾಜ್ಯ ಮಾದಕವಸ್ತು ಕಳ್ಳಸಾಗಣೆಯಲ್ಲಿ ಆರೋಪಿಗಳು ತೊಡಗಿದ್ದರು" ಎಂದು ಪಂಜಾಬ್ ರಾಜ್ಯ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಭಾರತ - ಪಾಕ್ ಗಡಿ ಗ್ರಾಮದಲ್ಲಿ 55 ಕೋಟಿ ಮೌಲ್ಯದ ಹೆರಾಯಿನ್ ಜಪ್ತಿ
''2023ರಲ್ಲಿ ಅತಿದೊಡ್ಡ ಪ್ರಮಾಣದ ಹೆರಾಯಿನ್ ಜಪ್ತಿ ಮಾಡಲಾಗಿದೆ. ಗುಪ್ತಚರ ನೇತೃತ್ವದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಫಿರೋಜ್ಪುರದ ಕೌಂಟರ್ ಇಂಟೆಲಿಜೆನ್ಸ್ ವಿಂಗ್ ನಾಲ್ವರು ಮಾದಕವಸ್ತು ಕಳ್ಳಸಾಗಣೆದಾರರನ್ನು ಬಂಧಿಸಿದೆ. 77 ಕೆಜಿ ಹೆರಾಯಿನ್ (41 ಕೆಜಿ + 31 ಕೆಜಿ) ಹಾಗೂ ಮೂರು ಪಿಸ್ತೂಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ'' ಎಂದು ಡಿಜಿಪಿ ಸರಣಿ ಟ್ವೀಟ್ ಮಾಡಿದ್ದಾರೆ.
''ಈ ಜಾಲವು ಪಂಜಾಬ್ನಲ್ಲಿ ದೊಡ್ಡ ಮಟ್ಟದಲ್ಲಿ ಗಡಿಯಾಚೆ ಮತ್ತು ಅಂತಾರಾಜ್ಯ ಮಾದಕವಸ್ತು ಕಳ್ಳಸಾಗಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿತ್ತು. ಈ ಕುರಿತು ಫಾಜಿಲ್ಕಾದಲ್ಲಿ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ. ಜಾಲ ಬೇಧಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ'' ಎಂದು ಅವರು ತಿಳಿಸಿದ್ದಾರೆ. ''ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ದೂರದೃಷ್ಟಿಯಂತೆ ಪಂಜಾಬ್ ಪೊಲೀಸರು ರಾಜ್ಯವನ್ನು ಮಾದಕವಸ್ತು ಮುಕ್ತಗೊಳಿಸಲು ಬದ್ಧರಾಗಿದ್ದಾರೆ'' ಎಂದು ಡಿಜಿಪಿ ಹೇಳಿದ್ದಾರೆ.
17 ಪಿಸ್ತೂಲ್‌ಗಳು ಜಪ್ತಿ :ಶನಿವಾರ ಪಂಜಾಬ್ ಪೊಲೀಸರು ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಜಾಲವನ್ನು ಭೇದಿಸಿ, 17 ಪಿಸ್ತೂಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಡಿಜಿಪಿ, ''ಕೌಂಟರ್ ಇಂಟೆಲಿಜೆನ್ಸ್ ತಂಡವು ಮಧ್ಯಪ್ರದೇಶದಿಂದ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಜಾಲವನ್ನು ಭೇದಿಸಿದೆ. ಗ್ಯಾಂಗ್‌ಗಳಿಗೆ ಈ ಶಸ್ತ್ರಾಸ್ತ್ರಗಳನ್ನು ತಯಾರಿಸಿ ಸರಬರಾಜು ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. 17 ಪಿಸ್ತೂಲ್‌ಗಳು ಮತ್ತು 35 ಮ್ಯಾಗಜೀನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ'' ಎಂದು ತಿಳಿಸಿದ್ದಾರೆ.
''ಈ ಶಸ್ತ್ರಾಸ್ತ್ರಗಳನ್ನು ಜಗ್ಗು ಭಗವಾನ್ ಪುರಿಯಾ ಮತ್ತು ರವಿ ಬಾಲಚೌರಿಯಾ ಕ್ರಿಮಿನಲ್ ಗ್ಯಾಂಗ್‌ಗಳಿಗೆ ಪೂರೈಕೆ ಮಾಡಲು ಉದ್ದೇಶಿಸಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ'' ಎಂದು ಡಿಜಿಪಿ ತಮ್ಮ ಮತ್ತೊಂದು ಟ್ವೀಟ್ನಲ್ಲಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:30 ಗ್ರಾಂ ಹೆರಾಯಿನ್ ಕಳ್ಳಸಾಗಣೆ ಆರೋಪ: ಮಹಿಳೆಯನ್ನ ಗಲ್ಲಿಗೇರಿಸಿದ ಸರ್ಕಾರ!!