ಹೈದರಾಬಾದ್ (ತೆಲಂಗಾಣ): ಪ್ರಿಯಕರನೋರ್ವ ತನ್ನ ಗೆಳತಿಯನ್ನು ನೀರಿನ ಟ್ಯಾಂಕರ್ ಕೆಳಗಡೆ ತಳ್ಳಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಹೈದರಾಬಾದ್ನಲ್ಲಿ ಇಂದು (ರವಿವಾರ) ನಡೆದಿದೆ. ಆರಂಭದಲ್ಲಿ ಇದೊಂದು ರಸ್ತೆ ಅಪಘಾತ ಎಂಬ ಶಂಕೆಯ ಮೇರೆಗೆ ಪೊಲೀಸರು ತನಿಖೆ ಕೈಗೊಂಡಾಗ ಯುವತಿ ಆಕಸ್ಮಿಕವಾಗಿ ಸಾವನ್ನಪ್ಪಿಲ್ಲ, ಆಕೆಯನ್ನು ಉದ್ದೇಶಪೂರ್ವಕವಾಗಿಯೇ ಹತ್ಯೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಮೀಳಾ ಕೊಲೆಯಾದ ಯುವತಿ. ಪ್ರಿಯಕರ ತಿರುಪತಿ ಎಂಬಾತ ಆರೋಪಿ. ಸದ್ಯ ಆತ ತಲೆ ಮರೆಸಿಕೊಂಡಿದ್ದು, ಪತ್ತೆಗೆ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಯ ವಿವರ: ಪ್ರಮೀಳಾ ಮೂಲತಃ ಕಾಮರೆಡ್ಡಿ ಜಿಲ್ಲೆಯ ಮಾಚರೆಡ್ಡಿ ಮಂಡಲದ ನೆಮಲಿಗುಟ್ಟು ತಾಂಡಾದ ನಿವಾಸಿ. ಹೈದರಾಬಾದ್ನ ಬಾಚುಪಲ್ಲಿಯಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ದರು. ಇಲ್ಲಿನ ಹಾಸ್ಟೆಲ್ನಲ್ಲಿ ಈಕೆ ವಾಸವಾಗಿದ್ದರು. ಮತ್ತೊಂದೆಡೆ, ಅದೇ ಜಿಲ್ಲೆಯ ರೋಡ್ ತಾಂಡಾದ ನಿವಾಸಿಯಾದ ತಿರುಪತಿ ಹಫೀಜ್ಪೇಟ್ನಲ್ಲಿ ವಾಸವಾಗಿದ್ದ. ಈತ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಇಬ್ಬರ ನಡುವಿನ ಪರಿಚಯದ ನಂತರ, ಕಳೆದ ಐದು ತಿಂಗಳಿಂದ ಪ್ರೀತಿಸುತ್ತಿದ್ದರು. ಇದರಿಂದ ಸಲುಗೆ ಹೆಚ್ಚಾಗಿ ಪ್ರಮೀಳಾ ವಾಸವಾಗಿದ್ದ ಹಾಸ್ಟೆಲ್ಗೂ ತಿರುಪತಿ ಬಂದು ಹೋಗುತ್ತಿದ್ದ. ಇದರ ನಡುವೆ ತಿರುಪತಿ ಬೇರೆ ಯುವತಿಯೊಂದಿಗೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಈ ವಿಷಯ ತಿಳಿದ ಪ್ರಮೀಳಾ ತನ್ನನ್ನೇ ಮದುವೆಯಾಗುವಂತೆ ಒತ್ತಡ ಹೇರಲು ಆರಂಭಿಸಿದ್ದರು.