ಬರೇಲಿ (ಉತ್ತರ ಪ್ರದೇಶ):ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ 14 ವರ್ಷಗಳ ಹಿಂದಿನ ಕಲಬೆರಕೆ ತುಪ್ಪ ಪ್ರಕರಣದಲ್ಲಿ ಐವರು ಅಪರಾಧಿಗಳಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಎಲ್ಲರಿಗೂ ತಲಾ 50 ಸಾವಿರ ರೂಪಾಯಿ ದಂಡ ಹಾಕಿದೆ. ಇದೇ ವೇಳೆ, ಇಬ್ಬರು ಖುಲಾಸೆಗೊಂಡಿದ್ದಾರೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅರವಿಂದ್ ಕುಮಾರ್ ಯಾದವ್ ಶುಕ್ರವಾರ ತೀರ್ಪು ನೀಡಿದ್ದಾರೆ. ಮಹೇಶ್, ಯೋಗೇಂದ್ರ, ಲೋಕಮಾನ್, ಸತ್ಯ ಪ್ರಕಾಶ್ ಮತ್ತು ಸುಬೋಧ್ ಎಂಬವರನ್ನು ದೋಷಿಗಳೆಂದು ಘೋಷಿಸಿ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದ್ದಾರೆ. ಮತ್ತೊಂದೆಡೆ, ಆರೋಪ ಸಾಬೀತಾಗದ ಕಾರಣ ರಜನೀಶ್ ಮತ್ತು ಅನುಪಮ್ ಅವರನ್ನು ನ್ಯಾಯಾಧೀಶರು ಖುಲಾಸೆಗೊಳಿಸಿದ್ದಾರೆ. ಜಿಲ್ಲೆಯಲ್ಲಿ ಕಲಬೆರಕೆ ದಂಧೆಯಲ್ಲಿ ತೊಡಗಿಸಿಕೊಂಡವರಿಗೆ ವಿಧಿಸಿರುವ ಇದುವರೆಗಿನ ದೊಡ್ಡ ಶಿಕ್ಷೆ ಎಂದೇ ಪರಿಗಣಿಸಲಾಗಿದೆ.
14 ವರ್ಷಗಳ ಹಿಂದೆ 26 ಕ್ವಿಂಟಲ್ ನಕಲಿ ದೇಸಿ ತುಪ್ಪ ಪತ್ತೆ:2009ರ ಅಕ್ಟೋಬರ್ 15ರಂದು ಸುಭಾಷ್ ನಗರ ಪೊಲೀಸರು ಸರ್ವೋದಯ ನಗರದ ಬಳಿಯ ಅನಂತ್ ಸಿಮೆಂಟ್ ಟ್ರೇಡರ್ಸ್ನ ನೆಲಮಾಳಿಗೆಯಲ್ಲಿ ಪೊಲೀಸರು ದಾಳಿ ಮಾಡಿದ್ದರು. ನಕಲಿ ದೇಸಿ ತುಪ್ಪ ತಯಾರಿಸುತ್ತಿದ್ದ ಐವರನ್ನು ರೆಡ್ ಹ್ಯಾಂಡ್ ಆಗಿ ಸೆರೆಹಿಡಿದಿದ್ದರು. ಅಲ್ಯೂಮಿನಿಯಂ ಡ್ರಮ್‌ಗಳಲ್ಲಿ ಸಂಗ್ರಹಿಸಿದ್ದ ನಕಲಿ ದೇಸಿ ತುಪ್ಪ ಪತ್ತೆಯಾಗಿತ್ತು. ಸೀಲ್ ಮಾಡಿದ್ದ ತುಪ್ಪ ಹಾಗೂ ಸಂಸ್ಕರಿಸಿದ ಎಣ್ಣೆ, ದೇಸಿ ತುಪ್ಪದಲ್ಲಿ ಬೆರೆಸಲು ಇಟ್ಟಿದ್ದ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಒಟ್ಟಾರೆ ಸುಮಾರು 26 ಕ್ವಿಂಟಲ್ ನಕಲಿ ದೇಸಿ ತುಪ್ಪವನ್ನು ಪೊಲೀಸರು ಪತ್ತೆ ಮಾಡಿದ್ದರು.