ಪುಣೆ (ಮಹಾರಾಷ್ಟ್ರ):ಸೇನೆಯ ದಕ್ಷಿಣ ಕಮಾಂಡ್‌ನ ಮಿಲಿಟರಿ ಇಂಟೆಲಿಜೆನ್ಸ್ (ಎಂಐ) ನಿಂದ ಪಡೆದ ಮಾಹಿತಿಯ ಆಧಾರದ ಮೇಲೆ 2019ರಲ್ಲಿ ಕರ್ತವ್ಯದಿಂದ ಪಲಾಯನ ಮಾಡಿದ್ದು, ಇನ್ನೂ ಆರ್ಮಿ ಅಧಿಕಾರಿಯಂತೆ ನಟಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಕರ್ನಾಟಕ ಮೂಲದ ಪ್ರಶಾಂತ್ ಭೌರಾವ್ ಪಾಟೀಲ್ (32) ಎಂದು ಗುರುತಿಸಲಾಗಿದೆ. ಈತ ಪ್ರಸ್ತುತ ಪುಣೆ ನಗರದ ಚಿಖಾಲಿ ಪ್ರದೇಶದಲ್ಲಿ ವಾಸಿಸುತ್ತಿದ್ದನು. ಸೋಮವಾರ ಮುಂಜಾನೆ ಬಂಡ್‌ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪ್ರಶಾಂತ್ ಭೌರಾವ್ ಪಾಟೀಲ್ ಪುಣೆಯ ಖಡ್ಕಿಯ ಅಂಗಡಿಯೊಂದರಿಂದ ಎರಡು ಭಾರತೀಯ ಸೇನೆಯ ಸುಬೇದಾರ್ ಸಮವಸ್ತ್ರಗಳು ಹಾಗೂ ಇತರ ಸಾಮಗ್ರಿಗಳನ್ನು ಖರೀದಿಸಿದ್ದ. ವಸ್ತ್ರಗಳ ಬಿಲ್ (4,700 ರೂ) ಪಾವತಿ ಮಾಡದೆ ವಂಚಿಸಿದ್ದಾನೆ. ಸೇನಾ ಮುಖ್ಯಸ್ಥರ ಕಚೇರಿಯ ಆವರಣದಲ್ಲಿ ಅಧಿಕಾರಿಯಂತೆ ನಟಿಸಿ, ತಾನು ವಾಸಿಸದೇ ಇರುವಂತಹ ಸದರ್ನ್ ಕಮಾಂಡ್ ಪುಣೆಯ ಕಚೇರಿ ವಿಳಾಸವನ್ನೂ ಬಳಸಿಕೊಂಡಿದ್ದ. ನಕಲಿ ಆಧಾರ್ ಕಾರ್ಡ್ ಬಳಸಿ ಭಾರತೀಯ ಸೇನೆಯ ಸಮವಸ್ತ್ರ ಧರಿಸಿರುವ ಚಿತ್ರವನ್ನು ಪ್ಯಾನ್ ಕಾರ್ಡ್ ಹಾಗೂ ಗುರುತಿನ ಚೀಟಿಗಳಲ್ಲಿ ಬಳಸಿ ವಂಚನೆ ಮಾಡಿದ್ದಕ್ಕಾಗಿ ಇದೀಗ ಪೊಲೀಸರು ಬಂಧಿಸಿದ್ದಾರೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಆರೋಪಿಯನ್ನು ಅಸ್ಸಾಂ ರೈಫಲ್ಸ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆತ 2019ರಲ್ಲಿ ಸೇವೆಯಿಂದ ಓಡಿಹೋಗಿದ್ದನು. ಈತನ ಮೇಲೆ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಸೇನಾ ಸಿಬ್ಬಂದಿಯಂತೆ ನಟಿಸಿ ಮಹಿಳೆಗೆ ವಂಚನೆ, ಫೋರ್ಜರಿ ಸಂಬಂಧಿಸಿದಂತೆ ಅನೇಕ ಕ್ರಿಮಿನಲ್ ಅಪರಾಧಗಳು ದಾಖಲಾಗಿವೆ. ಅಹಮದ್‌ನಗರ ಪೊಲೀಸರು ಬಂಧಿಸಿದ್ದರು. ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದನು. ಇದೀಗ ಪಾಟೀಲ್ನನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 170, 171, 420, 465, 471 ಅಡಿಯಲ್ಲಿ ಬಂಧಿಸಲಾಗಿದೆ.
ನಕಲಿ ಐಎಎಸ್ ಅಧಿಕಾರಿ ಬಂಧನ: ತಾನೊಬ್ಬ ಐಎಎಸ್ ಅಧಿಕಾರಿ. ಪ್ರಧಾನಿ ಕಾರ್ಯಾಲಯದ ಉಪ ಕಾರ್ಯದರ್ಶಿ ಎಂದು ಹೇಳಿಕೊಂಡು ಪುಣೆಯಲ್ಲಿ ಸುತ್ತಾಡುತ್ತಿದ್ದ ನಕಲಿ ಐಎಎಸ್ ಅಧಿಕಾರಿಯನ್ನು ಪುಣೆ ಪೊಲೀಸರು ಬಂಧಿಸಿದ ಘಟನೆ ಇತ್ತೀಚೆಗೆ ನಡೆದಿತ್ತು. ಪುಣೆಯ ಬನೇರ್ ಎಂಬಲ್ಲಿ ಸಾಮಾಜಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನಕಲಿ ಐಎಎಸ್ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆರೋಪಿ, ತನ್ನನ್ನು ಡಾ. ವಿನಯ್ ಡಿಯೋ ಅವರು ದೆಹಲಿಯ ಪ್ರಧಾನಿ ಕಾರ್ಯಾಲಯದ ಉಪ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದನು. ವ್ಯಕ್ತಿಯ ನಡವಳಿಕೆಯನ್ನು ಕಂಡು ಅನುಮಾನಗೊಂಡ ಕಾರ್ಯಕ್ರಮ ಆಯೋಜಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದರು. ಆರೋಪಿಯನ್ನು ವಾಸುದೇವ್ ನಿವೃತ್ತಿ ತಾಯ್ಡೆ ಎಂದು ಗುರುತಿಸಲಾಗಿತ್ತು.
ಇದನ್ನೂ ಓದಿ:Anekal Crime: ನಿವೇಶನ ನೀಡುವ ನೆಪದಲ್ಲಿ ನೂರಾರು ಮಂದಿಗೆ ನಾಮ ಹಾಕಿದ ಗ್ರಾಮ ಪಂಚಾಯತ್ ಸದಸ್ಯ ಬಂಧನ