ಜವಾಹರ್ನಗರ (ತೆಲಂಗಾಣ): ತೆಲಂಗಾಣ ರಾಜ್ಯದಲ್ಲಿ ಮನುಕುಲವೇ ತಲೆತಗ್ಗಿಸುವಂತ ಘಟನೆಯೊಂದು ನಡೆದಿದೆ. 28 ವರ್ಷದ ಯುವತಿಯನ್ನು ಬರೋಬ್ಬರಿ 15 ನಿಮಿಷಗಳ ಕಾಲ ನಡುರಸ್ತೆಯಲ್ಲೇ ವಿವಸ್ತ್ರಳಾಗಿ ನಿಲ್ಲಿಸಿದ ಹೀನ ಕೃತ್ಯ ಇದಾಗಿದೆ.
ಹೌದು, ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿರುವ ಘಟನೆ ಜವಾಹರ್ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಲಾಜಿನಗರದಲ್ಲಿ ಭಾನುವಾರ ನಡೆದಿದೆ. ಮದ್ಯದ ಅಮಲಿನಲ್ಲಿ ವ್ಯಕ್ತಿಯು ನಡುರಸ್ತೆಯಲ್ಲೇ ಯುವತಿಯ ಬಟ್ಟೆಯನ್ನು ಹರಿದು ಹಾಕಿ ಅಮಾನವೀಯವಾಗಿ ವರ್ತಿಸಿದ್ದಾನೆ. ಈ ವೇಳೆ ಯುವತಿಯು ವಿವಸ್ತ್ರಳಾಗಿ ಸುಮಾರು 15 ನಿಮಿಷಗಳ ಕಾಲ ನಡುರಸ್ತೆಯಲ್ಲೇ ಅತ್ತಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪೆದ್ದ ಮಾರಯ್ಯನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ನಶೆಯಲ್ಲಿ ಯುವತಿಯನ್ನು ವಿವಸ್ತ್ರಗೊಳಿಸಿದ ವ್ಯಕ್ತಿ: ಪೊಲೀಸರ ಮಾಹಿತಿ ಪ್ರಕಾರ, ಪೆದ್ದ ಮಾರಯ್ಯ ಎಂಬ ವ್ಯಕ್ತಿ ಜವಾಹರನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾನೆ. ಕುಡಿತಕ್ಕೆ ದಾಸನಾಗಿರುವ ಈತ ಭಾನುವಾರ ರಾತ್ರಿ 8:30ರ ಸುಮಾರಿಗೆ ತನ್ನ ತಾಯಿಯೊಂದಿಗೆ ಬಾಲಾಜಿನಗರ ಬಸ್ ನಿಲ್ದಾಣದಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಸ್ಥಳೀಯ ಯುವತಿಯೊಬ್ಬಳು ಅಂಗಡಿಯಿಂದ ಅದೇ ಮಾರ್ಗವಾಗಿ ನಡೆದುಕೊಂಡು ಬರುತ್ತಿದ್ದಳು. ಆಕೆಯನ್ನು ನೋಡಿದ ಮಾರಯ್ಯ ಯುವತಿಯ ಮೇಲೆ ಕೈಹಾಕಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವತಿ ಆತನನ್ನು ದೂರಕ್ಕೆ ತಳ್ಳಿದ್ದಾಳೆ. ಇದರಿಂದ ಮತ್ತಷ್ಟು ಉದ್ರೇಕಗೊಂಡ ಮಾರಯ್ಯ, ಯುವತಿಯ ಬಟ್ಟೆ ಹರಿದು ಹಾಕಿ ವಿವಸ್ತ್ರಗೊಳಿಸಿದ್ದಾನೆ. ಈ ವೇಳೆ ಆತನ ತಾಯಿ ಪಕ್ಕದಲ್ಲಿದ್ದರೂ ಮಗನ ದುಷ್ಕೃತ್ಯವನ್ನು ತಡೆಯುವ ಪ್ರಯತ್ನವನ್ನು ಮಾಡಿಲ್ಲ.