ನವದೆಹಲಿ/ಗಾಜಿಯಾಬಾದ್ :ಇತ್ತೀಚಿನ ದಿನಗಳಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿ ಒಂದಲ್ಲೊಂದು ಅಪರಾಧ ಕೃತ್ಯಗಳಿಂದ ಮುನ್ನಲೆಗೆ ಬರುತ್ತಲೇ ಇದೆ. ಇದೀಗ ಗೇಮಿಂಗ್ ಆ್ಯಪ್ ಮೂಲಕ ಬಾಲಕನ ಮತಾಂತರ ಪ್ರಕರಣದಲ್ಲಿ ಕೇಂದ್ರ ಗುಪ್ತಚರ ಇಲಾಖೆ (ಐಬಿ) ಮಧ್ಯಪ್ರವೇಶಿಸಿದೆ. ಈ ಹಿಂದೆ ಗಾಜಿಯಾಬಾದ್ ಪೊಲೀಸರು ಗೇಮಿಂಗ್ ಆ್ಯಪ್ ಮೂಲಕ ಮತಾಂತರ ಮಾಡುತ್ತಿದ್ದ ಗ್ಯಾಂಗ್‌ನ ಸದಸ್ಯರನ್ನು ಬಂಧಿಸಿದ್ದರು. ಪ್ರಕರಣ ಸಂಬಂಧ ಐಬಿ ಕೂಡ ವಿಶೇಷ ನಿಗಾ ಇಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಈ ಪ್ರಕರಣದಲ್ಲಿ ಮೇ 4 ರಂದು (ಭಾನುವಾರ) ಗಾಜಿಯಾಬಾದ್ ಪೊಲೀಸರು ಮೌಲಾನ ಅಬ್ದುಲ್ ಎಂಬಾತನನ್ನು ಬಂಧಿಸಿದ್ದರು. ಪ್ರಮುಖ ಆರೋಪಿ ಮಹಾರಾಷ್ಟ್ರದಲ್ಲಿ ನೆಲೆಸಿದ್ದು, ಆತನಿಗಾಗಿ ಗಾಜಿಯಾಬಾದ್ ಪೊಲೀಸರ ತಂಡ ಮಹಾರಾಷ್ಟ್ರಕ್ಕೆ ತೆರಳಿದೆ. ಭಯೋತ್ಪಾದಕರ ಜೊತೆಗೂ ಆರೋಪಿಗಳು ಒಡನಾಟ ಹೊಂದಿರುವುದು ತನಿಖೆಯಲ್ಲಿ ತಿಳಿದು ಬಂದಿದೆ.
ಪ್ರಕರಣದ ಹಿನ್ನೆಲೆ:ಗಾಜಿಯಾಬಾದ್‌ನ ಕವಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೆಲವು ದಿನಗಳ ಹಿಂದೆ ಜೈನ ಸಮುದಾಯದ ಕುಟುಂಬವೊಂದು ಗೇಮಿಂಗ್ ಆ್ಯಪ್‌ನಲ್ಲಿ ಮತಾಂತರ ಜಾಲದಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಆನೇಕ ಆಮಿಷಗಳನ್ನೊಡ್ಡಿ ನಮ್ಮ ಮಗನಿಗೆ ಅನ್ಯ ಧರ್ಮದ ಪಾಠಗಳನ್ನು ಕಲಿಸಲಾಗುತ್ತಿದೆ ಎಂದು ಆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಅಷ್ಟೇ ಅಲ್ಲ, ಆನ್ ಲೈನ್ ಮೂಲಕ ಮತಾಂತರ ನಡೆಯುತ್ತಿದೆ. ಮಹಾರಾಷ್ಟ್ರ ಮೂಲದ ಶಹನವಾಜ್ ಖಾನ್ ಎಂಬ ವ್ಯಕ್ತಿ ತನ್ನ ಹೆಸರನ್ನು ಬಡ್ಡೋ ಎಂದು ಬದಲಿಸಿಕೊಂಡು ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.