ಜೈಪುರ (ರಾಜಸ್ಥಾನ): ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ರಾಜಸ್ಥಾನದ ಓರ್ವ ಐಎಎಸ್ ಮತ್ತು ಐಪಿಎಸ್ ಅಧಿಕಾರಿ ಸೇರಿದಂತೆ ಐವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ಅಧಿಕಾರಿಗಳು ಹಾಗೂ ತಮ್ಮ ಸಿಬ್ಬಂದಿ ಸೇರಿಕೊಂಡು ರೆಸ್ಟೋರೆಂಟ್ ಸಿಬ್ಬಂದಿಗೆ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಕ್ರಮ ತೆಗೆದುಕೊಳ್ಳಲಾಗಿದೆ.
ಅಜ್ಮೀರ್ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಗಿರಿಧರ್ ಮತ್ತು ಗಂಗಾಪುರ ನಗರ ಪೊಲೀಸ್ ಇಲಾಖೆಯಲ್ಲಿ ವಿಶೇಷ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸುಶೀಲ್ ಕುಮಾರ್ ಬಿಷ್ಣೋಯ್ ಅಮಾನತುಗೊಂಡ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು. ಇವರ ಜೊತೆಗೆ ಗ್ರಾಮ ಲೆಕ್ಕಾಧಿಕಾರಿ ನರೇಂದ್ರ ಸಿಂಗ್ ದಹಿಯಾ, ಪೊಲೀಸ್ ಕಾನ್‌ಸ್ಟೇಬಲ್ ಮುಖೇಶ್ ಕುಮಾರ್ ಮತ್ತು ಕಿರಿಯ ಕ್ಲರ್ಕ್ ಹನುಮಾನ್ ಪ್ರಸಾದ್ ಚೌಧರಿ ಎಂಬವರನ್ನೂ ಅಮಾನತುಗೊಳಿಸಲಾಗಿದೆ.
ಘಟನೆಯ ವಿವರ: ಅಜ್ಮೀರ್ನಲ್ಲಿ ಜೂನ್ 11ರಂದು ಅಧಿಕಾರಿಗಳು ಪಾರ್ಟಿಯೊಂದರಲ್ಲಿ ಪಾಲ್ಗೊಂಡಿದ್ದರು. ಪಾರ್ಟಿಯಿಂದ ಹಿಂತಿರುಗುತ್ತಿದ್ದಾಗ ವಿಶ್ರಾಂತಿ ಪಡೆಯಲೆಂದು ರೆಸ್ಟೋರೆಂಟ್‌ವೊಂದಕ್ಕೆ ತೆರಳಿದ್ದರು. ಆಗ ರೆಸ್ಟೋರೆಂಟ್ ತೆರೆಯುವಂತೆ ಸಿಬ್ಬಂದಿಗೆ ಅಧಿಕಾರಿಗಳ ತಂಡ ಸೂಚಿಸಿತ್ತು. ಇದರಿಂದ ವಾಗ್ವಾದ ಉಂಟಾಗಿದೆ. ಐಪಿಎಸ್ ಅಧಿಕಾರಿ ಸಿಬ್ಬಂದಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದರಿಂದ ಗಲಾಟೆ ವಿಕೋಪಕ್ಕೆ ತಿರುಗಿತ್ತು ಎಂದು ಹೇಳಲಾಗಿದೆ.
ರೆಸ್ಟೋರೆಂಟ್ ಸಿಬ್ಬಂದಿಗೆ ಅಮಾನುಷವಾಗಿ ಥಳಿಸಿರುವ ದೃಶ್ಯಗಳು ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರ ನಂತರ ಇಡೀ ಘಟನೆ ಬೆಳಕಿಗೆ ಬಂದಿದೆ. ಇದರ ನಡುವೆ ಸೋಮವಾರ ತಡರಾತ್ರಿ ಮೂರ್ನಾಲ್ಕು ಪೊಲೀಸರೊಂದಿಗೆ ಐಪಿಎಸ್ ಅಧಿಕಾರಿಯೊಬ್ಬರು ತಮ್ಮ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ರೆಸ್ಟೋರೆಂಟ್ ಆಡಳಿತ ಮಂಡಳಿಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಐವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಗೇಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.