ಕೋರ್ಟ್ ಆವರಣದಲ್ಲೇ ಪಾತಕಿ ಮುಖ್ತಾರ್ ಅನ್ಸಾರಿ ಆಪ್ತನಿಗೆ ಗುಂಡಿಕ್ಕಿ ಹತ್ಯೆ ಲಖನೌ (ಉತ್ತರ ಪ್ರದೇಶ): ಕೋರ್ಟ್ ಆವರಣದಲ್ಲಿ ಗ್ಯಾಂಗ್ಸ್ಟರ್ವೋರ್ವನನ್ನು ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಇಂದು ಮಧ್ಯಾಹ್ನ ಉತ್ತರ ಪ್ರದೇಶದ ಲಖನೌದಲ್ಲಿ ನಡೆಯಿತು. ಇಲ್ಲಿನ ಸಿವಿಲ್ ಕೋರ್ಟ್ನಲ್ಲಿ ವಕೀಲರ ವೇಷದಲ್ಲಿದ್ದ ದುಷ್ಕರ್ಮಿ ಗುಂಡಿನ ದಾಳಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಪಶ್ಚಿಮ ಉತ್ತರ ಪ್ರದೇಶದಲ್ಲಿ ಕ್ರಿಮಿನಲ್ ಗ್ಯಾಂಗ್ ನಡೆಸುತ್ತಿದ್ದ ಸಂಜೀವ್ ಜೀವಾ ಹತ್ಯೆಗೀಡಾದ ಗ್ಯಾಂಗ್ಸ್ಟರ್. ಜನರಿಂದ ತುಂಬಿದ್ದ ಹಾಗೂ ಹಾಡಹಗಲೇ ಕೋರ್ಟ್ನಲ್ಲಿ ಘಟನೆ ನಡೆದಿದ್ದು, ರಾಜ್ಯದ ಬೆಚ್ಚಿಬೀಳಿಸುವಂತೆ ಮಾಡಿದೆ. ಸಂಜೀವ್ ಜೀವಾ ರಾಜಕಾರಣಿ ಹಾಗು ಪಾತಕಿ ಮುಖ್ತಾರ್ ಅನ್ಸಾರಿ ಆಪ್ತ ಎನ್ನಲಾಗಿದೆ. ಘಟನೆಯಲ್ಲಿ ಓರ್ವ ಬಾಲಕಿ ಹಾಗೂ ಪೊಲೀಸರಿಗೂ ಗಾಯಗಳಾಗಿವೆ.
ಸಂಜೀವ್ ಜೀವಾ ಮೇಲೆ ಹಲವು ಸುತ್ತು ಗುಂಡು ಹಾರಿಸಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಭೀಕರ ಕೊಲೆ ಬೆನ್ನಲ್ಲೇ ವಕೀಲರು ಆತಂಕಕ್ಕೀಡಾಗಿದ್ದಾರೆ. ಅಲ್ಲದೇ, ಕೋರ್ಟ್ ಆವರಣದಲ್ಲಿ ಭದ್ರತೆ ಹೆಚ್ಚಿಸುವ ವಿಷಯವಾಗಿ ಪ್ರತಿಭಟನೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಅವರ ಮೇಲೆ ಕಲ್ಲು ತೂರಾಟವನ್ನೂ ಮಾಡಿದ್ದಾರೆ. ಇದರಿಂದ ಸ್ಥಳಕ್ಕೆ ಹೆಚ್ಚುವರಿ ಪಡೆಗಳನ್ನು ರವಾನಿಸಲಾಗಿದೆ.
ಸಂಜೀವ್ ಜೀವಾ ಕ್ರಿಮಿನಲ್ ಹಿನ್ನೆಲೆ ಹೀಗಿದೆ..: ಹತ್ಯೆಯಾದ ಸಂಜೀವ್ ಜೀವಾನನ್ನು ಹಲವು ಕ್ರಿಮಿನಲ್ ಪ್ರಕರಣಗಳ ವಿಚಾರಣೆಗಾಗಿ ಲಖನೌ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಈ ವೇಳೆ ಗುಂಡು ಹಾರಿಸಿದ ಕೂಡಲೇ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ. ಸಂಜೀವ್ ಜೀವಾ ರಾಜಕಾರಣಿಯಾಗಿ ಬದಲಾಗಿರುವ ಪಾತಕಿ ಮುಖ್ತಾರ್ ಅನ್ಸಾರಿ ಮತ್ತು ಮುನ್ನಾ ಬಜರಂಗಿ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿದ್ದ ಎಂದು ತಿಳಿದು ಬಂದಿದೆ. 2018ರಲ್ಲಿ ಬಾಗ್ಪತ್ ಜೈಲಿನಲ್ಲೇ ಬಜರಂಗಿಯನ್ನು ಕೊಲೆ ಮಾಡಲಾಗಿತ್ತು.
1997ರ ಫೆಬ್ರವರಿಯಲ್ಲಿ ನಡೆದ ಬಿಜೆಪಿ ನಾಯಕ, ಮಾಜಿ ಸಚಿವ ಬ್ರಹ್ಮದತ್ ದ್ವಿವೇದಿ ಅವರ ಕೊಲೆಯಲ್ಲಿ ಸಂಜೀವ್ ಜೀವಾ ಸಹ ಆರೋಪಿಯಾಗಿದ್ದ. ಲೋಹೈ ರಸ್ತೆಯಲ್ಲಿ ಬ್ರಹ್ಮದತ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಪ್ರಕರಣದಲ್ಲಿ 2003ರಲ್ಲಿ ಸಿಬಿಐ ನ್ಯಾಯಾಲಯವು ಸಂಜೀವ್ ಜೀವಾ ಮತ್ತು ಮಾಜಿ ಶಾಸಕ ವಿಜಯ್ ಸಿಂಗ್ ಅವರಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು.
ಇದೇ ವಾರದ ಆರಂಭದಲ್ಲಿ ರಾಜಕಾರಣಿ ಮುಖ್ತಾರ್ ಅನ್ಸಾರಿಗೆ ವಾರಣಾಸಿಯ ನ್ಯಾಯಾಲಯವು 30 ವರ್ಷಗಳ ಹಿಂದೆ ಕಾಂಗ್ರೆಸ್ ನಾಯಕ ಅವಧೇಶ್ ರೈ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದೆ. ಅನ್ಸಾರಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದ ಸಂಜೀವ್ ಜೀವಾ ಆರಂಭದಲ್ಲಿ ರಸಾಯನಶಾಸ್ತ್ರಜ್ಞನಾಗಿದ್ದ. ಆದರೆ, ನಂತರದಲ್ಲಿ ಭೂಗತ ಜಗತ್ತಿನತ್ತ ಆಕರ್ಷಿತನಾಗಿದ್ದ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಕೋರ್ಟ್ನಲ್ಲಿ ವಕೀಲರ ಸೋಗಿನಲ್ಲಿದ್ದ ದುಷ್ಕರ್ಮಿಯಿಂದ ಫೈರಿಂಗ್: ಮಹಿಳೆಗೆ ಗುಂಡೇಟು