ಸತಾರ ( ಮಹಾರಾಷ್ಟ್ರ):ಮನೆಯೊಂದರಲ್ಲಿ ಒಂದೇ ಕುಟುಂಬದ ನಾಲ್ವರ ಶವಗಳು ಪತ್ತೆಯಾಗಿರುವ ಅಘಾತಕಾರಿ ಘಟನೆ ಸತಾರಾ ಜಿಲ್ಲೆಯ ಪಟಾನ್ ತಾಲೂಕಿನ ಧೇಬೆವಾಡಿ ಕಣಿವೆಯ ಸಂಬೂರ್ ಗ್ರಾಮದಲ್ಲಿ ನಡೆದಿದೆ. ಸದ್ಯ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಘಟನೆಯು ಜಿಲ್ಲಾದ್ಯಂತ ಸಂಚಲನ ಮೂಡಿಸಿದೆ. ದಂಪತಿ, ಅವಿವಾಹಿತ ಪುತ್ರ ಹಾಗೂ ವಿವಾಹಿತ ಪುತ್ರಿಯ ಮೃತದೇಹಗಳು ಪತ್ತೆಯಾಗಿವೆ. ಮೃತರನ್ನು ಆನಂದ ಪಾಂಡುರಂಗ ಜಾಧವ್ (70), ಪತ್ನಿ ಸುಮನ್ ಜಾಧವ್, ಮಗ ಸಂತೋಷ್ ಜಾಧವ್ ಮತ್ತು ವಿವಾಹಿತ ಪುತ್ರಿ ಪುಷ್ಪಾ ದಾಸ್ ಎಂದು ಗುರುತಿಸಲಾಗಿದೆ.
ಘಟನೆಯಿಂದ ಸಂಬೂರು ಗ್ರಾಮಸ್ಥರಲ್ಲಿ ಆತಂಕ: ಕುಟುಂಬದ ಯಜಮಾನ ಆನಂದ ಜಾಧವ್ ಶಿಕ್ಷಕರಾಗಿದ್ದು, ಜಾಧವ್ ಕುಟುಂಬವು ಹಲವು ವರ್ಷಗಳಿಂದ ಸಂಬೂರ್ ಗ್ರಾಮದಿಂದ ದೂರದಲ್ಲಿ ವಾಸಿಸುತ್ತಿತ್ತು. ನಾಲ್ವರು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದನ್ನು ಗಮನಿಸಿದ ತಕ್ಷಣ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಸಂಬೂರು ಗ್ರಾಮದಲ್ಲಿ ತಲ್ಲಣ ಸೃಷ್ಟಿಸಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡುವಂತೆ ಮಾಡಿದೆ .
ವೈದ್ಯರೊಂದಿಗೆ ಘಟನಾ ಸ್ಥಳ ಪರಿಶೀಲಿಸಿದ ಪೊಲೀಸರು: ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಧೆಬೆವಾಡಿ ಪೊಲೀಸ್ ಠಾಣೆಯ ಪೊಲೀಸರು ವೈದ್ಯರ ತಂಡದೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಘಟನೆ ಕುರಿತು ತನಿಖೆ ಚುರುಕುಗೊಳಿಸಿದ್ದಾರೆ. ಜಾಧವ್ ಅವರ ಕುಟುಂಬವು ಗ್ರಾಮದಿಂದ ದೂರ ವಾಸಿಸುತ್ತಿರುವುದರಿಂದ ಘಟನೆ ಯಾವಾಗ ಸಂಭವಿಸಿತು ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.